ದೇಶ

ಭಾರತ್ ಜೋಡೋ ಯಾತ್ರಿಗಳನ್ನು ಐಬಿ ತನಿಖೆ ಮಾಡುತ್ತಿದೆ: ಕೇಂದ್ರಕ್ಕೆ ಕಾಂಗ್ರೆಸ್ ಪತ್ರ

Srinivas Rao BV

ನವದೆಹಲಿ: ಭಾರತ್ ಜೋಡೋ ಯಾತ್ರೆಯಲ್ಲಿ ಭದ್ರತಾ ಲೋಪವಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಕಾಂಗ್ರೆಸ್ ಪಕ್ಷ ಪತ್ರ ಬರೆದಿದೆ. 

ಭಾರತ್ ಜೋಡೋ ಯಾತ್ರೆ ದೆಹಲಿಗೆ ಪ್ರವೇಶಿಸಿದಾಗ ದೆಹಲಿ ಪೊಲೀಸರು ಜನದಟ್ಟಣೆಯನ್ನು ತಡೆಯದೇ ಮೂಕ ಪ್ರೇಕ್ಷಕರಾಗಿದ್ದರು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಆರೋಪಿಸಿದ್ದಾರೆ.

ಜ.03 ರಂದು ಭಾರತ್ ಜೋಡೋ ಯಾತ್ರೆ ಸೂಕ್ಷ್ಮ ರಾಜ್ಯಗಳಾದ ಜಮ್ಮು-ಕಾಶ್ಮೀರ ಹಾಗೂ ಪಂಜಾಬ್ ಗಳಿಗೆ ಪ್ರವೇಶಿಸುತ್ತಿದೆ. ಈ ನಿಟ್ಟಿನಲ್ಲಿ ರಾಹುಲ್ ಗಾಂಧಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಬೇಕು ಎಂದು ವೇಣುಗೋಪಾಲ್ ಅಮಿತ್ ಷಾ ಅವರಿಗೆ ಮನವಿ ಮಾಡಿದ್ದಾರೆ. 

ಭಾರತ್ ಜೋಡೋ ಯಾತ್ರೆ ದೆಹಲಿ ಪ್ರವೇಶಿಸಿದಾಗ ಹಲವು ಬಾರಿ ಭದ್ರತಾ ವೈಫಗಳು ಉಂಟಾಗಿರುವುದನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಅದಷ್ಟೇ ಅಲ್ಲದೇ ಭಾರತ್ ಜೋಡೋ ಯಾತ್ರದಲ್ಲಿ ಭಾಗವಹಿಸಿದ್ದವರ ಪೈಕಿ ಹಲವು ಮಂದಿಯನ್ನು ಗುಪ್ತಚರ ವಿಭಾಗದವರು ತನಿಖೆ ಮಾಡುತ್ತಿದ್ದರು. 

ಹರ್ಯಾಣದಲ್ಲಿ ಭಾರತ್ ಜೋಡೋ ಯಾತ್ರೆಯ ಕಂಟೇನರ್ ಗಳಿಗೆ ಹರಿಯಾಣ ರಾಜ್ಯದ ಗುಪ್ತಚರ ದಳಕ್ಕೆ ಸೇರಿದ ಅಪರಿಚಿತ ವ್ಯಕ್ತಿಗಳು ಅಕ್ರಮವಾಗಿ ಪ್ರವೇಶಿಸಿದ್ದರ ಬಗ್ಗೆ ಡಿ.23 ರಂದು ಹರ್ಯಾಣದ ಸೋಹ್ನಾ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎಫ್ಐಆರ್ ದಾಖಲಿಸಿದ್ದೆವು ಎಂದು ವೇಣುಗೋಪಾಲ್ ಅಮಿತ್ ಷಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. 

ಕಾಂಗ್ರೆಸ್ ಪಕ್ಷದ ಇಬ್ಬರು ಪ್ರಧಾನಿಗಳು- ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ದೇಶಕ್ಕಾಗಿ ಜೀವ ತೆತ್ತಿದ್ದಾರೆ. 2013 ರ ಮೇ.25 ರಂದು ಚತ್ತೀಸ್ ಗಢದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಇಡೀ ರಾಜ್ಯದ ನಾಯಕತ್ವವೇ ಕಣ್ಮರೆಯಾಗಿ ಹೋಯಿತು. ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ದೇಶದಲ್ಲಿ ಶಾಂತಿ ಸೌಹಾರ್ದತೆ ಉಂಟುಮಾಡಲು ಕೈಗೊಳ್ಳುತ್ತಿರುವ ಪಾದಯಾತ್ರೆಯಾಗಿದೆ. ಸರ್ಕಾರ ದ್ವೇಷ ರಾಜಕಾರಣ ಮಾಡಬಾರದು ಹಾಗೂ ಕಾಂಗ್ರೆಸ್ ನಾಯಕರಿಗೆ ಭದ್ರತೆ ಒದಗಿಸಬೇಕು ಎಂದು ಅಮಿತ್ ಷಾಗೆ ಬರೆದಿರುವ ಪತ್ರದಲ್ಲಿ ವೇಣುಗೋಪಾಲ್ ತಿಳಿಸಿದ್ದಾರೆ.

SCROLL FOR NEXT