ದೇಶ

ರಾಹುಲ್ ಗಾಂಧಿ ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾದರೆ ತೊಂದರೆ ಇಲ್ಲ: ನಿತೀಶ್ ಕುಮಾರ್

Lingaraj Badiger

ಪಾಟ್ನಾ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾದರೆ ಯಾವುದೇ ತೊಂದರೆ ಇಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶನಿವಾರ ಸ್ಪಷ್ಟಪಡಿಸಿದ್ದಾರೆ.

ಇಂದು ನಗದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜನತಾ ದಳ-ಯುನೈಟೆಡ್ ನಾಯಕ, ತಾವು ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಪುನರುಚ್ಚರಿಸಿದರು. ಅಲ್ಲದೆ ಬಿಜೆಪಿಯನ್ನು ವಿರೋಧಿಸುವ ಪಕ್ಷಗಳನ್ನು ಬಲಪಡಿಸುವ ತಮ್ಮ ಬದ್ಧತೆಯನ್ನೂ ಬಿಹಾಸ ಸಿಎಂ ಪುನರುಚ್ಚರಿಸಿದರು.

2024 ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರು "ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿ" ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಇತ್ತೀಚೆಗೆ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ನಿತೀಶ್ ಕುಮಾರ್, ಅವರು ಪ್ರಧಾನಿ ಅಭ್ಯರ್ಥಿಯಾಗುವುದರಿಂದ ಮಿತ್ರ ಪಕ್ಷವಾದ ಕಾಂಗ್ರೆಸ್‌ನೊಂದಿಗೆ ಯಾವುದೇ ಸಮಸ್ಯೆ ಆಗಲ್ಲ ಎಂದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್ ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಹಾರ ಸಿಎಂ, ಮೋದಿ ಮತ್ತು ಆರ್‌ಎಸ್‌ಎಸ್ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ ಏನು ಎಂಬುದನ್ನು ತಿಳಿಸಬೇಕು ಎಂದಿದ್ದಾರೆ.

ಪ್ರಧಾನಿ ಮೋದಿ ದೇಶಕ್ಕಾಗಿ ಏನು ಮಾಡಿದ್ದಾರೆ? ಭಾರತ ಇಂದು ಎಲ್ಲಿದೆ? ದೇಶದಲ್ಲಿ ಯಾವ ಅಭಿವೃದ್ಧಿ ಕಾರ್ಯಗಳು ನಡೆದಿವೆ? ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಹೊಸ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

SCROLL FOR NEXT