ದೇಶ

ಅಮರಾವತಿ ಹತ್ಯೆ: ಕೋಲ್ಹೆ ಹತ್ಯೆ ಸ್ಥಳಕ್ಕೆ ಎನ್‌ಐಎ ತಂಡ ಭೇಟಿ; ಪ್ರಮುಖ ಆರೋಪಿ ಇರ್ಫಾನ್ ಖಾನ್‌ಗಾಗಿ ಶೋಧ

Vishwanath S

ಅಮರಾವತಿ: ಅಮಾನತುಗೊಂಡಿರುವ ಬಿಜೆಪಿ ನಾಯಕ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್‌ ಮಾಡಿದ್ದ ಹಿನ್ನೆಲೆಯಲ್ಲಿ ಹತ್ಯೆ ಮಾಡಲಾಗಿದೆ ಎಂಬ ಶಂಕೆಯಿಂದಾಗಿ ತನಿಖೆಗೆ ಮುಂದಾಗಿರುವ ಎನ್‌ಐಎ ತಂಡವು ಇಂದು ಪೂರ್ವ ಮಹಾರಾಷ್ಟ್ರದ ಅಮರಾವತಿ ನಗರಕ್ಕೆ ಭೇಟಿ ನೀಡಿದೆ. 

ಜೂನ್ 21ರಂದು ರಸಾಯನಶಾಸ್ತ್ರಜ್ಞ 54 ವರ್ಷದ ಉಮೇಶ್ ಪ್ರಹ್ಲಾದರಾವ್ ಕೋಲ್ಹೆ ಹತ್ಯೆಗೀಡಾಗಿದ್ದು ಘಟನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಇದಕ್ಕೂ ಮುನ್ನ ಕೇಂದ್ರ ಗೃಹ ಸಚಿವಾಲಯದ ವಕ್ತಾರರು ಟ್ವೀಟ್ ಮಾಡಿ, ಪ್ರಕರಣದ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಿದೆ. ಎನ್‌ಐಎ ತಂಡ ಅಮರಾವತಿ ತಲುಪಿದೆ ಎಂದು ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಔರಂಗಾಬಾದ್‌ನಿಂದ ರಾಜ್ಯ ಪೊಲೀಸರ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ತಂಡವೂ ನಗರಕ್ಕೆ ಭೇಟಿ ನೀಡುತ್ತಿದೆ ಎಂದು ತಿಳಿಸಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಟೇಲರ್ ಕನ್ಹಯ್ಯಾ ಲಾಲ್ ಹತ್ಯೆ ಮಾಡಿದ್ದ ಇಬ್ಬರು ವ್ಯಕ್ತಿಗಳು ಇಸ್ಲಾಂ ಧರ್ಮಕ್ಕೆ ಮಾಡಿದ ಅವಮಾನದ ಪ್ರತೀಕಾರ ಎಂದು ಹೇಳುವ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವ ಒಂದು ವಾರದ ಮೊದಲು ಕೋಲ್ಹೆಯ ಹತ್ಯೆ ನಡೆದಿತ್ತು. ಉದಯಪುರ ಟೈಲರ್ ಕನ್ಹಯ್ಯಾ ಲಾಲ್ ಹತ್ಯೆಯ ಬಗ್ಗೆಯೂ ಎನ್ಐಎ ತನಿಖೆ ನಡೆಸುತ್ತಿದೆ.

ರಾಜ್ಯ ಪೊಲೀಸರ ಪ್ರಕಾರ, ಕೋಲ್ಹೆ ಜೂನ್ 21ರಂದು ರಾತ್ರಿ 10ರಿಂದ 10.30ರ ನಡುವೆ ತನ್ನ ಅಂಗಡಿಯನ್ನು ಮುಚ್ಚಿ ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಹತ್ಯೆಯಾಗಿದ್ದರು. ಕೊಲೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಇನ್ನು ಎನ್‌ಜಿಒ ನಡೆಸುತ್ತಿರುವ ಪ್ರಮುಖ ಆರೋಪಿ ಇರ್ಫಾನ್ ಖಾನ್ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಮರಾವತಿ ಪೊಲೀಸ್ ಕಮಿಷನರ್ ಡಾ.ಆರತಿ ಸಿಂಗ್ ಈ ಹಿಂದೆ ತಿಳಿಸಿದ್ದರು.

SCROLL FOR NEXT