ದೇಶ

ಎಐಎಡಿಎಂಕೆ ಬಿಕ್ಕಟ್ಟು: ಒ ಪನ್ನೀರ್ ಸೆಲ್ವಂ ಉಚ್ಛಾಟನೆಗೆ ಪಕ್ಷ ನಿರ್ಣಯ; ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಇ ಪಳನಿಸ್ವಾಮಿ ಆಯ್ಕೆ!

Srinivasamurthy VN

ಚೆನ್ನೈ: ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಬಿಕ್ಕಟ್ಟು ಮುಂದುವರೆದಿದ್ದು, ಪಕ್ಷದ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ಆಯ್ಕೆಯಾಗಿದ್ದು, ಇದರ ಬೆನ್ನಲ್ಲೇ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಒ ಪನ್ನೀರ್ ಸೆಲ್ವಂರನ್ನು ಉಚ್ಛಾಟನೆ ಮಾಡಲು ಸರ್ವಾನುತದಿಂದ ನಿರ್ಣಯ ಕೈಗೊಳ್ಳಲಾಗಿದೆ.

ಪಕ್ಷದ ಕಾನೂನು ಸಮರದಲ್ಲಿ ಎಐಎಡಿಎಂಕೆ ಮುಖಂಡ ಓ ಪನ್ನೀರ್ ಸೆಲ್ವಂಗೆ ಹಿನ್ನೆಡೆಯಾಗಿದ್ದು, ಸೋಮವಾರ (ಜುಲೈ 11) ನಡೆದ ಪಕ್ಷದ ತುರ್ತು ಸಭೆಯಲ್ಲಿ ಪ್ರತಿಸ್ಪರ್ಧಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಮಧ್ಯಂತರ (ಹಂಗಾಮಿ) ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಚೆನ್ನೈನಲ್ಲಿ ಬೆಳಿಗ್ಗೆ ನಡೆದ ಪಕ್ಷದ ಸಾಮಾನ್ಯ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಏಕವ್ಯಕ್ತಿ ನಾಯಕತ್ವಕ್ಕೆ ಪಕ್ಷ ಅಧಿಕೃತ ಮುದ್ರೆ ಒತ್ತಿದೆ.

ಎಐಎಡಿಎಂಕೆಯ ಎಡಪ್ಪಾಡಿ ಕೆ ಪಳನಿಸ್ವಾಮಿ ನೇತೃತ್ವದಲ್ಲಿ ಕರೆಯಲಾದ ಸಭೆಗೆ ತಡೆ ನೀಡಬೇಕೆಂದು ಕೋರಿ ಓ ಪನ್ನೀರ್ ಸೆಲ್ವಂ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸುವ ಮೂಲಕ ಎಐಎಡಿಎಂಕೆ ಸಭೆ ನಡೆಸುವ ಹಾದಿ ಸುಗಮಗೊಳಿಸಿತ್ತು. ಮದ್ರಾಸ್ ಹೈಕೋರ್ಟ್ ಓ ಪನ್ನೀರ್ ಸೆಲ್ವಂ ಅರ್ಜಿಯನ್ನು ವಜಾಗೊಳಿಸಿದ ನಂತರ ತಮಿಳ್ ಮಹಾನ್ ಹುಸೈನ್ ಅಧ್ಯಕ್ಷತೆಯಲ್ಲಿ ನಡೆದ ಎಐಎಡಿಎಂಕೆ ಸಭೆಯಲ್ಲಿ ಕೆ.ಪಳನಿಸ್ವಾಮಿಯನ್ನು ಮಧ್ಯಂತರ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ವರದಿ ಹೇಳಲಾಗಿದೆ. ಇದರೊಂದಿಗೆ ಎಐಎಡಿಎಂಕೆಯಲ್ಲಿನ ಪ್ರಸ್ತುತ ನಾಯಕತ್ವದ ಜಟಾಪಟಿಗೆ ಕಡಿವಾಣ ಬಿದ್ದಂತಾಗಿದೆ.

ಪನ್ನೀರ್ ಸೆಲ್ವಂ ಉಚ್ಛಾಟನೆಗೆ ನಿರ್ಣಯ
ಇನ್ನು ಎಐಎಡಿಎಂಕೆ ಸಾಮಾನ್ಯ ಸಭೆಯಲ್ಲಿ, ಪಕ್ಷದಲ್ಲಿನ ಉಭಯ ನಾಯಕತ್ವ ರದ್ದುಗೊಳಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದ್ದು, ಅಲ್ಲದೇ ಎಐಎಡಿಎಂಕೆಗೆ ಉಪಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ರಚಿಸಲಾಗಿದೆ ಎಂದು ವರದಿ ತಿಳಿಸಿದೆ. ಚೆನ್ನೈನ ವನಗ್ರಾಮ್ ನಲ್ಲಿ ಎಐಎಡಿಎಂಕೆಯ ಸಾಮಾನ್ಯ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಓ ಪನ್ನೀರ್ ಸೆಲ್ವಂ ಬೆಂಬಲಿಗರು ಎಡಪ್ಪಾಡಿ ಕೆ.ಪಳನಿಸ್ವಾಮಿ ಫೋಟೋಗಳಿಗೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಬಲಿಗರ ಮಾರಾಮಾರಿ:
ನಾಯಕತ್ವದ ಜಂಗೀಕುಸ್ತಿಯಿಂದಾಗಿ ತಮಿಳುನಾಡಿನಲ್ಲಿ ಇ ಪಳನಿಸ್ವಾಮಿ ಮತ್ತು ಓ ಪನ್ನೀರ್ ಸೆಲ್ವಂ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದ್ದು, ಕೆಲವರು ಗಾಯಗೊಂಡಿರುವ ಘಟನೆ ನಡೆದಿದೆ.

ಒಪಿಎಸ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್: 
ಇದಕ್ಕೂ ಮುನ್ನ, ಎಐಎಡಿಎಂಕೆಯ ಸಾಮಾನ್ಯ ಮಂಡಳಿ ಸಭೆಗೆ ತಡೆ ನೀಡುವಂತೆ ಮಾಜಿ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ(ಒಪಿಎಸ್) ಮಾಡಿದ್ದ ಮನವಿಯನ್ನು ಸೋಮವಾರ ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿತ್ತು. ರಾಜಕೀಯ ಪಕ್ಷದ ಜಗಳದಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಈ ಮೂಲಕ ಪಕ್ಷದ ಸಾಮಾನ್ಯ ಮಂಡಳಿ ಸಭೆಯಲ್ಲಿ ಪ್ರತಿಸ್ಪರ್ಧಿ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಪಕ್ಷದ ಸಂಭವನೀಯ ಏಕೈಕ ನಾಯಕನಾಗಿ ಘೋಷಿಸಲು ನ್ಯಾಯಾಲಯ ದಾರಿ ಮಾಡಿಕೊಟ್ಟಿತ್ತು. ನ್ಯಾಯಮೂರ್ತಿ ಕೃಷ್ಣನ್ ರಾಮಸ್ವಾಮಿ ಅವರು ಸೋಮವಾರ ಬೆಳಿಗ್ಗೆ ತೀರ್ಪು ನೀಡಿದ್ದು, ತಮಿಳುನಾಡಿನ ಪ್ರಮುಖ ವಿರೋಧ ಪಕ್ಷದ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಜಿಸಿ(ಸಾಮಾನ್ಯ ಮಂಡಳಿ)ಸಭೆಯನ್ನು ನಡೆಸಲು ಇಪಿಎಸ್(ಎಡಪ್ಪಾಡಿ ಪಳನಿಸ್ವಾಮಿ) ಬಣಕ್ಕೆ ಅನುಮತಿ ನೀಡಿದ್ದರು. ಜುಲೈ 8ರಂದು ಒಪಿಎಸ್ ಮತ್ತು ಇಪಿಎಸ್ ಪರ ಹಿರಿಯ ವಕೀಲರ ಸುದೀರ್ಘ ವಾದ ಆಲಿಸಿದ್ದ ನ್ಯಾಯಾಧೀಶರು ಆದೇಶವನ್ನು ಇಂದಿಗೆ ಕಾಯ್ದಿರಿಸಿದ್ದರು.

SCROLL FOR NEXT