ದೇಶ

ಪನ್ನೀರ್ ಸೆಲ್ವಂ ಪುತ್ರರು ಸೇರಿ 18 ನಾಯಕರು ಎಐಎಡಿಎಂಕೆಯಿಂದ ಉಚ್ಚಾಟನೆ

Lingaraj Badiger

ಚೆನ್ನೈ: ಓ ಪನ್ನೀರ್ ಸೆಲ್ವಂ ಅವರನ್ನು ಪಕ್ಷದಿಂದ ಉಚ್ಚಾಟಿಸಿದ ಬೆನ್ನಲ್ಲೇ ಇ ಕೆ ಪಳನಿಸ್ವಾಮಿ ನೇತೃತ್ವದ ತಮಿಳುನಾಡಿನ ಪ್ರತಿಪಕ್ಷ ಎಐಎಡಿಎಂಕೆ ಓಪಿಎಸ್ ಅವರ ಇಬ್ಬರು ಪುತ್ರರು ಸೇರಿದಂತೆ 18 ನಾಯಕರನ್ನು ಪಕ್ಷದಿಂದ ಉಚ್ಚಾಟಿಸಿದೆ. ಪಕ್ಷದ ಮೇಲೆ ಏಕ ವ್ಯಕ್ತಿ ನಾಯಕತ್ವ ಹಿಡಿತದ ಹಗ್ಗಜಗ್ಗಾಟದ ನಡುವೆಯೇ ಪನ್ನೀರಸೆಲ್ವಂ ಅವರನ್ನು ಸೋಮವಾರ ಉಚ್ಚಾಟಿಸಲಾಗಿತ್ತು.

ಎಐಎಡಿಎಂಕೆ ಹಂಗಾಮಿ ಪ್ರಧಾನ ಕಾರ್ಯದರ್ಶಿ ಕೆ ಪಳನಿಸ್ವಾಮಿ ಅವರು ಇಂದು ಉಚ್ಛಾಟಿತ ನಾಯಕ ಓ ಪನ್ನೀರಸೆಲ್ವಂ ಅವರ ಪುತ್ರರಾದ, ತೇಣಿ ಕ್ಷೇತ್ರದ ಎಐಎಡಿಎಂಕೆ ಸಂಸದ ರವೀಂದ್ರನಾಥ್ ಮತ್ತು ಜಯಪ್ರದೀಪ್ ಹಾಗೂ ಮಾಜಿ ಸಚಿವ ವೆಲ್ಲಮಂಡಿ ಎನ್ ನಟರಾಜನ್ ಸೇರಿದಂತೆ 18 ನಾಯಕರನ್ನು ಉಚ್ಚಾಟಿಸಲಾಗಿದೆ.

ಈ 18 ಮಂದಿ ಪಕ್ಷದ ಹಿತಾಸಕ್ತಿ, ತತ್ವಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದು, ಸಂಘಟನೆಗೆ ಕಳಂಕ ತಂದಿದ್ದಾರೆ. ಹೀಗಾಗಿ ಶಿಸ್ತು ಕ್ರಮದ ಭಾಗವಾಗಿ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ಎಂದು ಪಕ್ಷದ ಪ್ರಕಟಣೆಯಲ್ಲಿ ಪಳನಿಸ್ವಾಮಿ ತಿಳಿಸಿದ್ದಾರೆ.

ಕಳೆದ ಸೋಮವಾರ, ಪಕ್ಷದ ನಿರ್ಣಾಯಕ ಜನರಲ್ ಕೌನ್ಸಿಲ್ ಸಭೆಗೆ ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದ್ದರಿಂದ, ಸಭೆಯಲ್ಲಿ ಪಕ್ಷದ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ( ಇಪಿಎಸ್ ) ಅವರನ್ನು ಎಐಎಡಿಎಂಕೆಯ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಓಪಿಎಸ್ ಸೇರಿದಂತೆ ಅವರ ಬೆಂಬಲಿಗರಾದ ಆರ್ ವೈತಿಲಿಂಗಂ ಮತ್ತು ಪಿ ಎಚ್ ಮನೋಜ್ ಪಾಂಡಿಯನ್ ಅವರನ್ನೂ ಪಕ್ಷದಿಂದ ಉಚ್ಚಾಟಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

SCROLL FOR NEXT