ದೇಶ

ನಾನು ಬೆಂಬಲ ಕೇಳಲು ಯತ್ನಿಸಿದಾಗ ಕರೆ ಸ್ವೀಕರಿಸಲೂ ನಿತೀಶ್ ನಿರಾಕರಿಸಿದ್ದರು: ರಾಷ್ಟ್ರಪತಿ ಅಭ್ಯರ್ಥಿ ಯಶ್ವಂತ್ ಸಿನ್ಹಾ

Srinivas Rao BV

ಪಾಟ್ನ: ರಾಷ್ಟ್ರಪತಿ ಚುನಾವಣೆಗೆ ವಿಪಕ್ಷಗಳ ಅಭ್ಯರ್ಥಿಯಾಗಿರುವ ಯಶ್ವಂತ್ ಸಿನ್ಹಾ ಬಿಹಾರ ಸಿಎಂ ನಿತೀಶ್ ಕುಮಾರ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

"ನಾನು ರಾಷ್ಟ್ರಪತಿ ಚುನಾವಣೆಯಲ್ಲಿ ಬೆಂಬಲ ಕೇಳಲು ಯತ್ನಿಸಿದಾಗ ಬಿಹಾರ ಸಿಎಂ ನಿತೀಶ್ ಕುಮಾರ್ ನನ್ನ ಕರೆ ಸ್ವೀಕರಿಸುವುದಕ್ಕೂ ನಿರಾಕರಿಸಿದ್ದರು" ಎಂದು ಯಶ್ವಂತ್ ಸಿನ್ಹಾ ಬೇಸರ ವ್ಯಕ್ತಪಡಿಸಿದ್ದಾರೆ. 

ಸಿನ್ಹಾ ಹಾಗೂ ನಿತೀಶ್ ಕುಮಾರ್ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಸಂಪುಟ ಸಹೋದ್ಯೋಗಿಗಳಾಗಿದ್ದರು. 

ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಒಡಿಶಾ ಮೂಲದವರಾಗಿದ್ದು ರಾಜ್ಯದ ಮಗಳೆಂಬ ಕಾರಣಕ್ಕಾಗಿ ಸಿಎಂ ನವೀನ್ ಪಟ್ನಾಯಕ್ ಮುರ್ಮುಗೆ ಬೆಂಬಲ ಘೋಷಿಸಿದ್ದಾರೆ. ಆದರೆ ನಾನು ಬಿಹಾರದವನಾಗಿದ್ದರೂ ಬಿಹಾರ ಸಿಎಂ ನಿತೀಶ್ ಕುಮಾರ್ ನನಗೆ ಬೆಂಬಲ ನೀಡಲು ಮುಂದಾಗಿಲ್ಲ ಎಂದು ಯಶ್ವಂತ್ ಸಿನ್ಹಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.

"ನನ್ನನ್ನು ವಿಪಕ್ಷಗಳು ರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಿಸಿದಾಗ ನಾನು ಬೆಂಬಲ ಕೇಳಲು ನಿತೀಶ್ ಕುಮಾರ್ ಅವರಿಗೆ ಹಲವು ಬಾರಿ ಕರೆ ಮಾಡಲು ಯತ್ನಿಸಿದೆ. ಆದರೆ ಅವರು ಕರೆ ಸ್ವೀಕರಿಸಲೇ ಇಲ್ಲ" ಎಂದು ಮನನೊಂದ ಸಿನ್ಹಾ ಹೇಳಿದ್ದಾರೆ. 

ಜು.18 ರಂದು ನಡೆಯಲಿರುವ ಚುನಾವಣೆಗೆ ಯಶ್ವಂತ್ ಸಿನ್ಹಾ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಬಿಹಾರ ವಿಪಕ್ಷ ನಾಯಕ ತೇಜಸ್ವಿ ಯಾದವ್, ಶತೃಘ್ನ ಸಿನ್ಹಾ, ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾನಿ ಅವರ ಆಪ್ತ ಸುಧೀಂದ್ರ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

60 ವರ್ಷಗಳ ಬಳಿಕ, ರಾಜೇಂದ್ರ ಪ್ರಸಾದ್ ಅವರ ನಂತರ ಈ ನೆಲದಿಂದ ಒಬ್ಬರು ರಾಷ್ಟ್ರಪತಿಯಾದರೆ ಅದು ಬಿಹಾರಕ್ಕೆ ಒಳಿತು ಮಾಡುತ್ತದೆ. ಈ ನಗರದಲ್ಲೇ ನಾನು ಹುಟ್ಟಿ ಬೆಳೆದಿದ್ದು, ನನ್ನ ವಿದ್ಯಾಭ್ಯಾಸವಾಗಿದ್ದು ಪಾಟ್ನ ವಿಶ್ವವಿದ್ಯಾನಿಲಯದಲ್ಲಿ ಬಿಹಾರ ಕೇಡರ್ ನ ಐಎಎಸ್ ಅಧಿಕಾರಿಯಾಗಿಯೂ ನಾನು ಕಾರ್ಯನಿರ್ವಹಿಸಿದ್ದೇನೆ ಎಂದು ಸಿನ್ಹಾ ಹೇಳಿದ್ದಾರೆ. 

SCROLL FOR NEXT