ದೇಶ

2024ರ ಲೋಕಸಭೆ ಚುನಾವಣೆಗೆ ಉದ್ಧವ್ ಠಾಕ್ರೆ ನೇತೃತ್ವ ಇಲ್ಲ: ಶಿವಸೇನೆ ಬಂಡಾಯ ಸಂಸದ

Lingaraj Badiger

ನವದೆಹಲಿ: 2024ರ ಲೋಕಸಭೆ ಚುನಾವಣೆಯನ್ನು ಉದ್ಧವ್‌ ಠಾಕ್ರೆ ನೇತೃತ್ವದಲ್ಲಿ ಎದುರಿಸುವುದಿಲ್ಲ. ಭಾರತೀಯ ಜನತಾ ಪಕ್ಷದೊಂದಿಗೆ(ಬಿಜೆಪಿ) ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯ ಎಂದು ಶಿವಸೇನೆಯ ಬಂಡಾಯ ನಾಯಕ, ಸಂಸದ ರಾಹುಲ್ ಶೆವಾಲೆ ಅವರು ಗುರುವಾರ ಹೇಳಿದ್ದಾರೆ.

"ನಾನು ಠಾಕ್ರೆ ಅವರೊಂದಿಗಿನ ಸಭೆಯಲ್ಲಿ ಲೋಕಸಭೆ ಚುನಾವಣೆಯ ನಾಯಕತ್ವದ ವಿಷಯವನ್ನು ಪ್ರಸ್ತಾಪಿಸಿದೆ. ಉಪಸ್ಥಿತರಿದ್ದ ಸಂಜಯ್ ರಾವತ್ ಅವರು ಚುನಾವಣೆಯನ್ನು ಠಾಕ್ರೆ ಅವರ ನೇತೃತ್ವದಲ್ಲಿ ಎದುರಿಸಬೇಕು ಎಂದು ಸನ್ನೆ ಮಾಡಿದರು. ನಾವು ಠಾಕ್ರೆ ಅವರನ್ನು ಗೌರವಿಸುತ್ತೇವೆ. ಆದರೆ ನಾವು ವಾಸ್ತವಿಕವಾಗಿರಬೇಕು ಎಂದು ಅವರಿಗೆ ಹೇಳಿದೆ. ಅವರು ಲೋಕಸಭೆ ಚುನಾವಣೆಯ ನೇತೃತ್ವ ವಹಿಸಲು ಸಾಧ್ಯವಿಲ್ಲ’’ ಎಂದು ಲೋಕಸಭೆಯ ಶಿವಸೇನಾ ನಾಯಕ ಶೆವಾಲೆ ಅವರು ಪಿಟಿಐಗೆ ತಿಳಿಸಿದ್ದಾರೆ.

ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್‌ಸಿಪಿ) ಮತ್ತು ಕಾಂಗ್ರೆಸ್ ಜೊತೆಗಿನ ಶಿವಸೇನೆಯ ಮೈತ್ರಿಯು ಹಲವಾರು ಕ್ಷೇತ್ರಗಳಲ್ಲಿ ಈ ಪಕ್ಷಗಳು ಪ್ರತಿಸ್ಪರ್ಧಿಗಳಾಗಿರುವುದರಿಂದ ವಿಷಯ ಮತ್ತಷ್ಟು ಸಂಕೀರ್ಣಗೊಳಿಸಿದೆ ಎಂದು ಶೆವಾಲೆ ಹೇಳಿದ್ದಾರೆ.

"ಇದಲ್ಲದೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಯುಪಿಎ ಲೋಕಸಭೆ ಚುನಾವಣೆ ಎದುರಿಸಲಿದೆ. ಇದನ್ನು ನಮ್ಮ ಕಾರ್ಯಕರ್ತರು ಒಪ್ಪಿಕೊಳ್ಳುವುದಿಲ್ಲ" ಎಂದು ಶೆವಾಲೆ ತಿಳಿಸಿದ್ದಾರೆ.

ಹೆಚ್ಚಿನ ಸಂಖ್ಯೆಯ ಶಿವಸೇನಾ ನಾಯಕರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಒಲವು ತೋರಿದ್ದಾರೆ ಮತ್ತು ಮುಂದಿನ ಲೋಕಸಭೆ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎದುರಿಸಲು ಉತ್ಸುಕರಾಗಿದ್ದಾರೆ ಎಂದು ಶೆವಾಲೆ ಹೇಳಿದ್ದಾರೆ.
 

SCROLL FOR NEXT