ದೇಶ

ಎಐಎಡಿಎಂಕೆ ಪಕ್ಷದ ಕಚೇರಿಯಿಂದ ಅಮೂಲ್ಯ ದಾಖಲೆಗಳು, ವಸ್ತುಗಳ ಲೂಟಿ: ಓ ಪನ್ನೀರ್ ಸೆಲ್ವಂ ವಿರುದ್ಧ ದೂರು ದಾಖಲು

Nagaraja AB

ಚೆನ್ನೈ: ಎಐಎಡಿಎಂಕೆ ಹಂಗಾಮಿ ಪ್ರಧಾನ ಕಾರ್ಯದರ್ಶಿ ಕೆ ಪಳನಿಸ್ವಾಮಿ ಮತ್ತು ಓ ಪನ್ನೀರ್ ಸೆಲ್ವಂ  ಬೆಂಬಲಿಗರ ನಡುವೆ ಜುಲೈ 11 ರಂದು ಘರ್ಷಣೆವೇರ್ಪಟ್ಟಿದ್ದಾಗ ಪಕ್ಷದ ಕಚೇರಿಯಿಂದ ದಾಖಲೆಗಳು, ವಸ್ತುಗಳನ್ನು ಲೂಟಿ ಮಾಡಲಾಗಿದೆ ಎಂದು ಪ್ರತಿಪಕ್ಷ ಅಖಿಲ ಭಾರತ ಅಣ್ಣಾ ಡ್ರಾವಿಡ ಮುನ್ನೆತ್ರ ಕಳಗಂ ಶನಿವಾರ ಆರೋಪಿಸಿದೆ. 

ಈ ಸಂಬಂಧ ಪನ್ನೀರ್ ಸೆಲ್ವಂ ಮತ್ತು ಅವರ ಸಹಚರರ ವಿರುದ್ಧ  ಪಕ್ಷದ ಹಿರಿಯ ಮುಖಂಡ ರಾಜ್ಯಸಭಾ ಸದಸ್ಯ ಸಿ. ವಿ, ಷಣ್ಮುಗಂ ದೂರು ದಾಖಲಿಸಿದ್ದಾರೆ. ಎಐಎಡಿಎಂಕೆ ಕಚೇರಿಯಿಂದ ದಾಖಲೆಗಳು ಸೇರಿದಂತೆ ಮತ್ತಿತರ ಅಮೂಲ್ಯ ವಸ್ತುಗಳು ನಾಪತ್ತೆಯಾಗಿರುವುದಾಗಿ ತಿಳಿಸಿದರು.

ದೂರು ದಾಖಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಷಣ್ಮುಗಂ, ಪನ್ನೀರ್ ಸೆಲ್ವಂ ಪಕ್ಷದ ಕಚೇರಿಯನ್ನು ಮುರಿದು ದಾಖಲೆಗಳನ್ನು  ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಎಲ್ಲಾ ರೂಮ್ ಗಳ ಬಾಗಿಲುಗಳನ್ನು ಮುರಿದು ಹಾನಿಗೊಳಿಸಲಾಗಿದ್ದು, ಅನೇಕ ವಸ್ತುಗಳನ್ನು ಲೂಟಿ ಮಾಡಲಾಗಿದೆ ಎಂದು ಆರೋಪಿಸಿದರು.

ಕಚೇರಿ ಕಟ್ಟಡಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪನ್ನೀರ್ ಸೆಲ್ವಂಗೆ ಸೇರಿದ ವಾಹನದಲ್ಲಿ ತೆಗೆದುಕೊಂಡು ಹೋಗಲಾಗಿದೆ. ಈ ಎಲ್ಲ ಕೃತ್ಯಗಳನ್ನು ಪನ್ನೀರ್ ಸೆಲ್ವಂ ಬೆಂಬಲಿಗರು ಮಾಡಿದ್ದಾರೆ. ಉಚ್ಚಾಟಿತ ನಾಯಕನ ವಿರುದ್ಧ ಕ್ರಮ ಕೈಗೊಳ್ಳಲು ಪಕ್ಷ ಕೋರಿರುವುದಾಗಿ ತಿಳಿಸಿದರು. 

ಜುಲೈ 11 ರಂದು ಪಕ್ಷದ ಮಹತ್ವದ ನಿರ್ಣಯ ಕೈಗೊಳ್ಳುವ ಜನರಲ್ ಕೌನ್ಸಿಲ್ ವಿಶೇಷ ಸಭೆ ನಡೆಯುತ್ತಿದ್ದಾಗ ಓ. ಪನ್ನೀರ್ ಸೆಲ್ವಂ ಮತ್ತು ಪಳನಿಸ್ವಾಮಿ ಬೆಂಬಲಿಗರ ನಡುವೆ ಪಕ್ಷದ ಕಚೇರಿ ಬಳಿ ಘರ್ಷಣೆವೇರ್ಪಟ್ಟಿತ್ತು. ನಂತರ ಪಳನಿಸ್ವಾಮಿ ಅವರು ನಾಯಕರಾಗಿ ಆಯ್ಕೆಯಾದರೆ, ಪನ್ನೀರ್ ಸೆಲ್ವಂ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.  
        

SCROLL FOR NEXT