ದೇಶ

ಕೇರಳದಲ್ಲಿ ಆಫ್ರಿಕನ್‌ ಹಂದಿ ಜ್ವರ ಪತ್ತೆ: ಹಂದಿ ಕೊಲ್ಲುವ ಪ್ರಕ್ರಿಯೆ ಆರಂಭ

Srinivasamurthy VN

ವಯನಾಡ್‌: ಕೇರಳದಲ್ಲಿ ಆಫ್ರಿಕನ್‌ ಹಂದಿ ಜ್ವರ ಪತ್ತೆಯಾದ ಬೆನ್ನಲ್ಲೇ ಸ್ಥಳೀಯ ಆಡಳಿತ  ಸರ್ಕಾರದ ಆದೇಶದಂತೆ ಹಂದಿಗಳನ್ನು ಕೊಲ್ಲುವ ಕಾರ್ಯ ಆರಂಭಿಸಿದೆ.

ಕೇರಳದ ವಯನಾಡ್ ಜಿಲ್ಲೆಯಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಸರ್ಕಾರ ಹಂದಿಗಳ ಕೊಲ್ಲಲು ಆದೇಶಿಸಿತ್ತು. ಆದರೆ ಇದಕ್ಕೆ ಸ್ಥಳೀಯ ಹಂದಿ ಸಾಕಣ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ರೈತರ ವಿರೋಧದ ಹೊರತಾಗಿಯೂ ಅಧಿಕಾರಿಗಳು ಇಂದು ಸೋಂಕಿತ ಹಂದಿಗಳನ್ನು ಕೊಲ್ಲುವ ಕಾರ್ಯ ಆರಂಭಿಸಿದ್ದಾರೆ.  

ಎರಡು ಜಮೀನಿನಲ್ಲಿ ರೋಗ ಕಾಣಿಸಿಕೊಂಡಿರುವ ಮಾನಂತವಾಡಿಯಲ್ಲಿ ಹಂದಿಗಳನ್ನು ಕೊಲ್ಲುವ ಕಾರ್ಯ ನಡೆಸಲಾಗಿದ್ದು, ಸಬ್‌ಕಲೆಕ್ಟರ್, ಭೋಪಾಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್‌ನಿಂದ ಪಡೆದ ಪರೀಕ್ಷಾ ವರದಿಗಳನ್ನು ತೋರಿಸಿ ಕಲಿಂಗ್ ಪ್ರಕ್ರಿಯೆಗೆ ಸಹಕರಿಸುವಂತೆ ರೈತರಿಗೆ ಮನವಿ ಮಾಡಿ ಕೊಲ್ಲುವ ಪ್ರಕ್ರಿಯೆ ಆರಂಭಿಸಿದರು. ಈ ವೇಳೆ ಕೆಲ ರೈತರು ವಿರೋಧ ವ್ಯಕ್ತಪಡಿಸಿದರಾದರೂ ಅಧಿಕಾರಿಗಳು ಅವರಿಗೆ ಪರಿಸ್ಥಿತಿಯ ಮನವರಿಕೆ ಮಾಡಿಕೊಟ್ಟರು.  

360 ಹಂದಿಗಳನ್ನು ಹೊಂದಿರುವ ಸಂತ್ರಸ್ತ ರೈತನಿಗೆ ಇತರ ಪ್ರದೇಶಗಳಿಗೆ ಅಥವಾ ಜಮೀನಿಗೆ ರೋಗ ಹರಡುವುದನ್ನು ತಡೆಯಲು ರಾಷ್ಟ್ರೀಯ ಪ್ರೋಟೋಕಾಲ್ ಪ್ರಕಾರ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ಬಳಿಕ ರೈತರ ಒಪ್ಪಿಗೆ ಮೇರೆಗೆ ಹಂದಿಗಳನ್ನು ಕೊಲ್ಲಲಾಯಿತು. ಸಂತ್ರಸ್ತ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗುವುದು ಎಂದು ಕಾರ್ಯಾಚರಣೆಯನ್ನು ಸಂಯೋಜಿಸುತ್ತಿರುವ ಸಬ್ ಕಲೆಕ್ಟರ್ ಹೇಳಿದರು. 

ವಯನಾಡ್ ಜಿಲ್ಲೆಯ ಮಾನಂತವಾಡಿ ಪ್ರದೇಶದಲ್ಲಿನ ಎರಡು ಫಾರ್ಮ್‌ಗಳಲ್ಲಿರುವ ಹಂದಿಗಳು ರೋಗಕ್ಕೆ ತುತ್ತಾಗಿದ್ದವು. ಇವುಗಳ ಪರೀಕ್ಷಾ ವರದಿ ಧನಾತ್ಮಕವಾಗಿದ್ದವು. ಒಂದು ಫಾರ್ಮ್‌ನಲ್ಲಿರುವ ಎಲ್ಲಾ ಪ್ರಾಣಿಗಳು ಆಫ್ರಿಕನ್ ಹಂದಿ ಜ್ವರದಿಂದ ಸಾವನ್ನಪ್ಪಿವೆ. ಇನ್ನೊಂದು ಫಾರ್ಮ್‌ನಲ್ಲಿ, ಕಲ್ಲಿಂಗ್ ಕಾರ್ಯಾಚರಣೆಯು ಭಾನುವಾರ ಪ್ರಾರಂಭವಾಗಿದ್ದು, ಒಂದು ವಾರದ ಸಮಯದಲ್ಲಿ ಕಲ್ಲಿಂಗ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.

ಕೇರಳದ ಪಶುಸಂಗೋಪನಾ ಸಚಿವ ಜೆ ಚಿಂಚು ರಾಣಿ ಅವರು ಶುಕ್ರವಾರ ರಾಜ್ಯದಲ್ಲಿ ಸೋಂಕನ್ನು ದೃಢಪಡಿಸಿದ್ದರು. ಹಂದಿ ಜ್ವರದ ಕ್ರಿಯಾ ಯೋಜನೆಯ ಭಾಗವಾಗಿ ಜೈವಿಕ ಭದ್ರತೆ ಮತ್ತು ತ್ಯಾಜ್ಯ ವಿಲೇವಾರಿ ಕಾರ್ಯವಿಧಾನವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಹಂದಿ ಸಾಕಣೆ ಕೇಂದ್ರಗಳಿಗೆ ಸೂಚಿಸಿದ್ದರು. ಭೋಪಾಲ್‌ನ ಪ್ರಯೋಗಾಲಯದಲ್ಲಿ ಮಾದರಿಗಳನ್ನು ಪರೀಕ್ಷಿಸಿದ ನಂತರ ಎರಡು ಫಾರ್ಮ್‌ಗಳ ಹಂದಿಗಳಲ್ಲಿ ರೋಗ ದೃಢಪಟ್ಟಿತ್ತು. 

ಪರೀಕ್ಷಾ ಫಲಿತಾಂಶಗಳ ಪ್ರಕಾರ, ರಾಜ್ಯ ಸರ್ಕಾರವು ಹಂದಿಗಳು ಮತ್ತು ಹಂದಿಮಾಂಸ ಸಂಬಂಧಿತ ಉತ್ಪನ್ನಗಳ ಅಂತರ-ರಾಜ್ಯ ಮಾರಾಟ ಮತ್ತು ಸಾಗಣೆಯ ಮೇಲಿನ ನಿಷೇಧವನ್ನು ಸರ್ಕಾರ ವಿಸ್ತರಿಸಿದೆ.

ಬಿಹಾರ ಮತ್ತು ಕೆಲವು ಈಶಾನ್ಯ ರಾಜ್ಯಗಳಲ್ಲಿ ಆಫ್ರಿಕನ್ ಹಂದಿ ಜ್ವರ ವರದಿಯಾಗಿದೆ ಎಂದು ಕೇಂದ್ರದ ಎಚ್ಚರಿಕೆಯ ನಂತರ ಕೇರಳವು ಈ ತಿಂಗಳ ಆರಂಭದಲ್ಲಿ ಜೈವಿಕ ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸಿತ್ತು. ಆಹಾರ ಮತ್ತು ಕೃಷಿ ಸಂಸ್ಥೆ (FAO) ಪ್ರಕಾರ, ಆಫ್ರಿಕನ್ ಹಂದಿ ಜ್ವರವು ದೇಶೀಯ ಹಂದಿಗಳ ಅತ್ಯಂತ ಸಾಂಕ್ರಾಮಿಕ ಮತ್ತು ಮಾರಣಾಂತಿಕ ವೈರಲ್ ರೋಗವಾಗಿದೆ. 
 

SCROLL FOR NEXT