ದೇಶ

ಕೇಂದ್ರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ: ವಿರೋಧ ಪಕ್ಷಗಳಿಂದ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಪತ್ರ

Ramyashree GN

ನವದೆಹಲಿ: ವಿರೋಧ ಪಕ್ಷಗಳು ಮತ್ತು ನಾಯಕರನ್ನು ಗುರಿಯಾಗಿಸಿಕೊಳ್ಳಲು ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಹೀಗಾಗಿ ಕೂಡಲೇ ಮಧ್ಯೆ ಪ್ರವೇಶಿಸಬೇಕು ಎಂದು ಹಲವು ವಿರೋಧ ಪಕ್ಷಗಳ ನಾಯಕರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.

ಮುಂಗಾರು ಅಧಿವೇಶನದ ಕಲಾಪಗಳ ಮೇಲೆ ಪರಿಣಾಮ ಬೀರಿರುವ ದೇಶದಲ್ಲಿನ ಬೆಲೆ ಏರಿಕೆ ಮತ್ತು ಜಿಎಸ್‌ಟಿ ಹೆಚ್ಚಳದ ಕುರಿತು ತುರ್ತು ಚರ್ಚೆಗೆ ಅವಕಾಶ ನೀಡದ ಸರ್ಕಾರದ ಹಠಮಾರಿ ಧೋರಣೆಯ ಬಗ್ಗೆಯೂ ವಿರೋಧ ಪಕ್ಷಗಳ ನಾಯಕರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

'ನರೇಂದ್ರ ಮೋದಿ ನೇತೃತ್ವದ ಸರ್ಕಾರವು ತನ್ನ ರಾಜಕೀಯ ವಿರೋಧಿಗಳನ್ನು ಹಣಿಯಲು ಅವರ ವಿರುದ್ಧ ವ್ಯವಸ್ಥಿತ ಸೇಡಿನ ಅಭಿಯಾನದ ಭಾಗವಾಗಿ ತನಿಖಾ ಸಂಸ್ಥೆಗಳನ್ನು ನಿರಂತರವಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಇದನ್ನು ನಿಮ್ಮ ಗಮನಕ್ಕೆ ತರಲು ನಾವು ಈ ಪತ್ರವನ್ನು ಬರೆಯುತ್ತಿದ್ದೇವೆ' ಎಂದು ಕಾಂಗ್ರೆಸ್, ಎಎಪಿ, ಆರ್‌ಜೆಡಿ ಮತ್ತು ಸಿಪಿಐ-ಎಂ ಸೇರಿದಂತೆ ಹಲವು ಪಕ್ಷಗಳ ನಾಯಕರು ಸಹಿ ಹಾಕಿರುವ ಪತ್ರದಲ್ಲಿ ದೂರಲಾಗಿದೆ.

ಹೀಗಾಗಿ, ಕೂಡಲೇ ನೀವು ಈ ವಿಚಾರದಲ್ಲಿ ಮಧ್ಯೆ ಪ್ರವೇಶಿಸಬೇಕು ಎಂದು ನಾಯಕರು ಒತ್ತಾಯಿಸಿದ್ದಾರೆ.

'ಕಾನೂನು ಎಂದರೆ ಕಾನೂನಾಗಿದೆ. ಅದನ್ನು ಭಯ ಅಥವಾ ಯಾವುದೇ ವ್ಯಕ್ತಿಯ ಪರವಾಗಿಲ್ಲದೆಯೇ ಜಾರಿಗೊಳಿಸಬೇಕು. ಆದರೆ, ಸದ್ಯ ಕಾನೂನನ್ನು ಅನಿಯಂತ್ರಿತವಾಗಿ, ಆಯ್ದ ಮತ್ತು ಹಲವಾರು ವಿರೋಧ ಪಕ್ಷಗಳ ಪ್ರಮುಖ ನಾಯಕರ ವಿರುದ್ಧ ಯಾವುದೇ ಸಮರ್ಥನೆ ಇಲ್ಲದೆ ಬಳಸಲಾಗುತ್ತಿದೆ. ಈ ಅಭಿಯಾನದ ಏಕೈಕ ಗುರಿ ವ್ಯಕ್ತಿಯ ಖ್ಯಾತಿಯನ್ನು ನಾಶಪಡಿಸುವುದಾಗಿದೆ. ಸೈದ್ಧಾಂತಿಕವಾಗಿ ಮತ್ತು ರಾಜಕೀಯವಾಗಿ ಬಿಜೆಪಿ ವಿರುದ್ಧ ಹೋರಾಡುವ ಶಕ್ತಿಯನ್ನೇ ದುರ್ಬಲಗೊಳಿಸುವುದಾಗಿದೆ' ಎಂದು ವಿರೋಧ ಪಕ್ಷದ ನಾಯಕರು ದೂರಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಜೀವನೋಪಾಯದ ನಷ್ಟ ಮತ್ತು ಜೀವ ಭದ್ರತೆ ಇಲ್ಲದಿರುವುದು, ಸ್ವಾತಂತ್ರ್ಯ ಮತ್ತು ಆಸ್ತಿಯ ಅಭದ್ರತೆಯ ಸಮಸ್ಯೆಗಳಿಂದ ನಮ್ಮ ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಹ ಇದನ್ನು ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದರು.

SCROLL FOR NEXT