ದೇಶ

ಶಿಕ್ಷಕರ ನೇಮಕಾತಿ ಹಗರಣ: ಬಂಧಿತ ಪಾರ್ಥ ಚಟರ್ಜಿಯನ್ನು ಸಂಪುಟದಿಂದ ವಜಾಗೊಳಿಸಿದ ಮಮತಾ

Lingaraj Badiger

ಕೋಲ್ಕತ್ತಾ: ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಪಶ್ಚಿಮ ಬಂಗಾಳ ಕೈಗಾರಿಕೆ ಸಚಿವ ಪಾರ್ಥ ಚಟರ್ಜಿ ಅವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ  ಸಂಪುಟದಿಂದ ವಜಾಗೊಳಿಸಿದ್ದಾರೆ.

ಇಂದು ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇದಕ್ಕು ಮುನ್ನ ಪಾರ್ಥ ಚಟರ್ಜಿಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಹಾಗೂ ಇತರ ನಾಯಕರು ಒತ್ತಾಯಿಸಿದ್ದರು.

ಚಟರ್ಜಿ ಅವರ ನಿಕಟವರ್ತಿ ಅರ್ಪಿತಾ ಮುಖರ್ಜಿಯವರೊಂದಿಗೆ ನಂಟು ಹೊಂದಿರುವ ಅಪಾರ್ಟ್‌ಮೆಂಟ್‌ಗಳಿಂದ ಸುಮಾರು 50 ಕೋಟಿ ರೂಪಾಯಿ ನಗದು ಮತ್ತು ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಆಸ್ತಿ ಮತ್ತು ವಿದೇಶಿ ವಿನಿಮಯದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

"ಪಾರ್ಥ ಚಟರ್ಜಿ ಅವರನ್ನು ಸಚಿವ ಸಂಪುಟದಿಂದ ಮತ್ತು ಪಕ್ಷದ ಎಲ್ಲಾ ಹುದ್ದೆಗಳಿಂದ ತಕ್ಷಣವೇ ವಜಾಗೊಳಿಸಬೇಕು. ಅವರನ್ನು ಉಚ್ಚಾಟಿಸಬೇಕು. ನನ್ನ ಈ ಹೇಳಿಕೆಯು ತಪ್ಪೆಂದು ಪರಿಗಣಿಸಿದರೆ, ನನ್ನನ್ನು ಎಲ್ಲಾ ಹುದ್ದೆಗಳಿಂದ ತೆಗೆದುಹಾಕಲು ಪಕ್ಷಕ್ಕೆ ಎಲ್ಲ ಅಧಿಕಾರ ಇದೆ. ನಾನು ಟಿಎಂಸಿಯ ಸೈನಿಕನಾಗಿ ಮುಂದುವರಿಯುತ್ತೇನೆ" ಎಂದು ಪಕ್ಷದ ವಕ್ತಾರರೂ ಆಗಿರುವ ಘೋಷ್ ಟ್ವೀಟ್ ಮಾಡಿದ್ದರು.

SCROLL FOR NEXT