ದೇಶ

ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಭೇಟಿಯಾದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಅಮಿತ್ ಶಾ

Ramyashree GN

ನವದೆಹಲಿ: ಕಾಂಗ್ರೆಸ್‌ ನಾಯಕ ಅಧೀರ್ ರಂಜನ್ ಚೌಧರಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು 'ರಾಷ್ಟ್ರಪತ್ನಿ' ಎಂದು ಕರೆದಿರುವ ಬೆನ್ನಲ್ಲೇ ಬಿಜೆಪಿ ಪಾಳೆಯದಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ, ಕೇಂದ್ರ ಸಚಿವ ಅಮಿತ್ ಶಾ ಮತ್ತು ಸ್ಮೃತಿ ಇರಾನಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ್ದಾರೆ.

ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿರುವ ಉಭಯ ನಾಯಕರು ಮುರ್ಮು ಅವರನ್ನು ಭೇಟಿಯಾಗಿರುವುದು ಸೌಜನ್ಯದ ಭೇಟಿಯಷ್ಟೇ ಎಂದಿದ್ದಾರೆ.

ಚಿತ್ರದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಒಬ್ಬರೇ ರಾಷ್ಟ್ರಪತಿಯನ್ನು ಭೇಟಿಯಾಗಿದ್ದರೆ, ಸ್ಮೃತಿ ಇರಾನಿ ಅವರು ಕೇಂದ್ರ ಸಚಿವರಾದ ಮಹೇಂದ್ರ ಮುಂಜ್ಪಾರಾ ಮತ್ತು ಜಾನ್ ಬಾರ್ಲಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.

ನಿನ್ನೆಯಷ್ಟೇ, ಕ್ಯಾಬಿನೆಟ್ ಸಚಿವ ಮತ್ತು ಕಾನೂನು ಸಚಿವ ಕಿರಣ್ ರಿಜಿಜು ಮತ್ತು ಎಸ್.ಪಿ ಸಿಂಗ್ ಬಘೇಲ್ ಅವರು ರಾಷ್ಟ್ರಪತಿಯನ್ನು ಭೇಟಿಯಾಗಿದ್ದರು.

ಅದರ ಹಿಂದಿನ ದಿನ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಅವರ ಇಲಾಖೆಯ ರಾಜ್ಯ ಖಾತೆ ಸಚಿವರು ಮುರ್ಮು ಅವರನ್ನು ಭೇಟಿಯಾಗಿ ಶುಭಾಶಯ ಸಲ್ಲಿಸಿದ್ದರು.

ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿರುವ ಮಾಜಿ ಬಿಜೆಪಿ ನಾಯಕಿ ದ್ರೌಪದಿ ಮುರ್ಮು ಜುಲೈ 25 ರಂದು ಭಾರತದ 15ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ ಮೊದಲ ಬುಡಕಟ್ಟು ವ್ಯಕ್ತಿ ಮತ್ತು ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ಎರಡನೇ ಮಹಿಳೆ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.

ಅಧೀರ್ ರಂಜನ್ ಚೌಧರಿಯವರ 'ರಾಷ್ಟ್ರಪತ್ನಿ' ಹೇಳಿಕೆಯು ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ಕೆಸರೆರೆಚಾಟಕ್ಕೆ ಕಾರಣವಾಗಿತ್ತು. ಬಿಜೆಪಿಯು ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿತು. ಚೌಧರಿ ಉದ್ದೇಶಪೂರ್ವಕವಾಗಿಯೇ ದ್ರೌಪದಿ ಮುರ್ಮು ಅವರಿಗೆ ಅವಮಾನ ಎಸಗಿದ್ದಾರೆ ಎಂದು ಆರೋಪಿಸಿದರು ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದರು. ಇದು ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ತಿಕ್ಕಾಟಕ್ಕೆ ಕಾರಣವಾಯಿತು.

ಇದೇ ವಿಚಾರ ಲೋಕಸಭೆ ಮತ್ತು ರಾಜ್ಯಸಭೆಯಲ್ಲೂ ಪ್ರತಿಧ್ವನಿಸಿತು. ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವಿನ ಹಗ್ಗಜಗ್ಗಾಟದಿಂದಾಗಿ ಉಭಯ ಸದನಗಳನ್ನು ಸೋಮವಾರಕ್ಕೆ ಮುಂದೂಡಲಾಯಿತು.

SCROLL FOR NEXT