ದೇಶ

ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ: 3 ಎಲ್ ಇಟಿ ಉಗ್ರರು ಹತ

Sumana Upadhyaya

ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ರಾತ್ರಿಯಿಂದ ಭಾನುವಾರ ನಸುಕಿನ ಜಾವದವರೆಗೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರ ಜಿಲ್ಲೆಯ ದ್ರಾಬ್ಗಾಮ್ ಪ್ರದೇಶದಲ್ಲಿ ನಿನ್ನೆ ಶನಿವಾರ ಎನ್‌ಕೌಂಟರ್ ನಡೆದಿದ್ದು, ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಗಿತ್ತು.

ಉಗ್ರರು ಪಲಾಯನ ಮಾಡುವುದನ್ನು ತಡೆಯಲು ಕಳೆದ ರಾತ್ರಿ ಪ್ರದೇಶವನ್ನು ಸುತ್ತುವರಿಯಲಾಗಿತ್ತು. ಇಂದು ಭಾನುವಾರ ಬೆಳಿಗ್ಗೆ ಮತ್ತೆ ಗುಂಡಿನ ದಾಳಿ ನಡೆಸಿದಾಗ ಇನ್ನೂ ಇಬ್ಬರು ಭಯೋತ್ಪಾದಕರು ಕೊಲ್ಲಲ್ಪಟ್ಟರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಹತರಾದ ಮೂವರು ಸ್ಥಳೀಯರಾಗಿದ್ದು, ಭಯೋತ್ಪಾದಕ ಸಂಘಟನೆ ಎಲ್‌ಇಟಿ ಯೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಕಾಶ್ಮೀರ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ಹೇಳಿದ್ದಾರೆ.

ಅವರಲ್ಲಿ ಒಬ್ಬನನ್ನು ಜುನೈದ್ ಶೀರ್ಗೋಜ್ರಿ ಎಂದು ಗುರುತಿಸಲಾಗಿದೆ, ಕಳೆದ ತಿಂಗಳು 13ರಂದು ನಮ್ಮ ಸಹೋದ್ಯೋಗಿ ಹುತಾತ್ಮ ರಿಯಾಜ್ ಅಹ್ಮದ್ ಹತ್ಯೆಯಲ್ಲಿ ಭಾಗಿಯಾಗಿದ್ದನು ಎಂದು ಟ್ವೀಟ್ ಮಾಡಿದ್ದಾರೆ.

ಇನ್ನಿಬ್ಬರನ್ನು ಫಾಜಿಲ್ ನಜೀರ್ ಭಟ್ ಮತ್ತು ಇರ್ಫಾನ್ ಅಹ್ಮದ್ ಮಲಿಕ್ ಎಂದು ಗುರುತಿಸಲಾಗಿದೆ. ದಕ್ಷಿಣ ಕಾಶ್ಮೀರ ಜಿಲ್ಲೆಯ ದ್ರಾಬ್ಗಾಮ್ ಪ್ರದೇಶದಲ್ಲಿ ಭಯೋತ್ಪಾದಕರ ಇರುವಿಕೆ ಬಗ್ಗೆ ಮಾಹಿತಿ ನೀಡಿದ ನಂತರ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಗುಂಡಿನ ಚಕಮಕಿ ಆರಂಭವಾಯಿತು. 

ಕಾರ್ಯಾಚರಣೆಯ ಸಂದರ್ಭದಲ್ಲಿ ಪೊಲೀಸರು ಎರಡು ಎಕೆ 47 ರೈಫಲ್‌ಗಳು ಮತ್ತು ಒಂದು ಪಿಸ್ತೂಲ್ ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಐಜಿಪಿ ತಿಳಿಸಿದ್ದಾರೆ.

SCROLL FOR NEXT