ದೇಶ

ಪ್ರವಾದಿ ಕುರಿತ ಹೇಳಿಕೆ ವಿರೋಧಿಸಿ ಪ್ರತಿಭಟನೆ, ಹಿಂಸಾಚಾರ: ಆರೋಪಿ ವೆಲ್ಫೇರ್ ಪಾರ್ಟಿ ನಾಯಕ ಜಾವೆದ್ ಅಹ್ಮದ್ ವಿರುದ್ಧ ಬುಲ್ಡೋಜರ್ ಕ್ರಮ ಆರಂಭಿಸಿದ ಯೋಗಿ ಸರ್ಕಾರ!!

Srinivasamurthy VN

ಲಖನೌ: ಪ್ರವಾದಿ ಕುರಿತ ಬಿಜೆಪಿ ನಾಯಕಿ ನೂಪುರ್ ಶರ್ಮಾ ಹೇಳಿಕೆ ವಿರೋಧಿಸಿ ನಡೆದಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮತ್ತು ಉತ್ತರ ಪ್ರದೇಶದ ವೆಲ್ಫೇರ್ ಪಾರ್ಟಿ ನಾಯಕ ಜಾವೆದ್ ಅಹ್ಮದ್ ವಿರುದ್ಧ ಯೋಗಿ ಆದಿತ್ಯಾನಾಥ್  ಸರ್ಕಾರ ತನ್ನ ಬುಲ್ಡೋಜರ್ ಕ್ರಮ ಆರಂಭಿಸಿದೆ.

ಪ್ರಯಾಗ್ರಾಜ್ ಹಿಂಸಾಚಾರದ ಮಾಸ್ಟರ್ ಮೈಂಡ್ ಮತ್ತು ವೆಲ್ಫೇರ್ ಪಾರ್ಟಿ ನಾಯಕ ಜಾವೇದ್ ಅಹ್ಮದ್ ಮನೆ ಧ್ವಂಸ ಕಾರ್ಯಾಚರಣೆ ಉತ್ತರ ಪ್ರದೇಶದಲ್ಲಿ ಪ್ರಾರಂಭವಾಗಿದ್ದು, ಭದ್ರತೆಗೆ ನೂರಾರು ಪೊಲೀಸರನ್ನು ನಿಯೋಜಿಸಲಾಗಿದೆ.

ಪ್ರಯಾಗ್ ರಾಜ್ ಪ್ರಾಧಿಕಾರವು ಅಹ್ಮದ್‌ ಅವರ ಮನೆ ಕೆಡವುವುದಕ್ಕೆ ಸಂಬಂಧಿಸಿದ ನೋಟಿಸ್‌ ಅಂಟಿಸಿತ್ತು. ಮನೆಯನ್ನು 'ಅಕ್ರಮವಾಗಿ ನಿರ್ಮಿಸಲಾಗಿದೆ'. ಇಂದು (ಭಾನುವಾರ) ಬೆಳಗ್ಗೆ 11ರ ಒಳಗೆ ಮನೆ ಖಾಲಿ ಮಾಡಬೇಕು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿತ್ತು. ಇದೀಗ ಬುಲ್ಡೋಜರ್‌  ಕಾರ್ಯಾಚರಣೆ ಆರಂಭವಾಗಿದೆ.

ಪ್ರವಾದಿ ಮಹಮ್ಮದ್‌ ಕುರಿತಂತೆ ನೀಡಿದ್ದ ಅವಹೇಳನಕಾರಿ ಹೇಳಿಕೆ ಸಂಬಂಧ ನೂಪುರ್‌ ಶರ್ಮಾ ಅವರ ಬಂಧನಕ್ಕೆ ಆಗ್ರಹಿಸಿ ಶುಕ್ರವಾರ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಜಾವೇದ್‌ ಅಹ್ಮದ್‌, ಪ್ರಯಾಗ್‌ರಾಜ್‌ನಲ್ಲಿ ನಡೆದ ಹಿಂಸಾಚಾರದ 'ಸೂತ್ರಧಾರ' ಎಂದು ಉತ್ತರ  ಪ್ರದೇಶ ಪೊಲೀಸರು ಶನಿವಾರವಷ್ಟೇ ಹೇಳಿದ್ದರು. ‌‌ಪ್ರಯಾಗ್‌ರಾಜ್‌ ಹಳೆ ನಗರದ ಕರೇಲಿ ಪ್ರದೇಶದಲ್ಲಿರುವ ಜೆ.ಕೆ ಅಶೀನಾ ಕಾಲೊನಿಯ ನಿವಾಸಿಯಾಗಿರುವ ಅಹ್ಮದ್‌ ಅವರನ್ನು ಗಲಭೆಗೆ ಸಂಬಂಧಿಸಿದಂತೆ ಈಗಾಗಲೇ ಬಂಧಿಸಲಾಗಿದೆ.

ಜಾವೇದ್‌ ಅಹ್ಮದ್‌ ಬಂಧನದ ಮಾಹಿತಿ ನೀಡಿದ್ದ ಪ್ರಯಾಗ್‌ರಾಜ್‌ನ ಹಿರಿಯ ಸೂಪರಿಂಟೆಂಡ್‌ ಆಫ್‌ ಪೊಲೀಸ್‌ (ಎಸ್‌ಎಸ್‌ಪಿ) ಅಜಯ್‌ ಕುಮಾರ್‌, 'ಗಲಭೆ ಪ್ರಕರಣದ ಸೂತ್ರಧಾರನನ್ನು ಬಂಧಿಸಲಾಗಿದೆ. ಪೊಲೀಸರು ಮತ್ತು ಅಧಿಕಾರಿಗಳತ್ತ ಕಲ್ಲು ತೂರಲು ಸಣ್ಣ ಮಕ್ಕಳನ್ನು ಬಳಸಿಕೊಳ್ಳುವ  ಇಂತಹ ಇನ್ನೂ ಹಲವು ಮಾಸ್ಟರ್‌ಮೈಂಡ್‌ಗಳು ಇರಬಹುದು. 29 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಾಗಿದೆ. ಗ್ಯಾಂಗ್‌ಸ್ಟರ್‌ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು' ಎಂದಿದ್ದರು.
 

SCROLL FOR NEXT