ದೇಶ

'ಮಹಾ' ಸಂಘರ್ಷ: ಉದ್ಧವ್ ಬಣದ ಅನರ್ಹತೆ ಬಾಣಕ್ಕೆ ರೆಬೆಲ್ ನಾಯಕರ ತಿರುಗೇಟು, ಡೆಪ್ಯುಟಿ ಸ್ಪೀಕರ್ ವಿರುದ್ಧ ನಿರ್ಣಯ!

Srinivasamurthy VN

ಮುಂಬೈ: ಮಹಾರಾಷ್ಟ್ರದಲ್ಲಿ ಭುಗಿಲೆದ್ದಿರುವ ರಾಜಕೀಯ ಸಂಘರ್ಷ ತಾರಕಕ್ಕೇರಿದ್ದು, ರೆಬೆಲ್ ನಾಯಕರನ್ನು ಅನರ್ಹಗೊಳಿಸುವ ಶಿವಸೇನೆ ಉದ್ಧವ್ ಠಾಕ್ರೆ ಕಾರ್ಯತಂತ್ರಕ್ಕೆ ತಿರುಗೇಟು ನೀಡಿರುವ ಏಕನಾಥ್ ಶಿಂಧೆ ನೇತೃತ್ವದ ರೆಬೆಲ್ ಶಾಸಕರಣ ಬಣ ಡೆಪ್ಯುಟಿ ಸ್ಪೀಕರ್ ವಿರುದ್ಧ ನಿರ್ಣಯ ಕೈಗೊಂಡು ಪದಚ್ಯುತಗೊಳಿಸುವ ಕಾರ್ಯತಂತ್ರಕ್ಕೆ ಚಾಲನೆ ನೀಡಿದೆ.

ಇಂದು ನಡೆದ ಶಿವಸೇನೆಯ ಬಂಡಾಯ ಶಾಸಕರ ಸಭೆಯಲ್ಲಿ ಡೆಪ್ಯುಟಿ ಸ್ಪೀಕರ್ ನರಹರಿ ಝಿರ್ವಾಲ್ ಅವರನ್ನು ಪದಚ್ಯುತಗೊಳಿಸಲು ನಿರ್ಣಯ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಅದರಂತೆ ಬಂಡಾಯ ಗುಂಪಿನ 46 ಶಾಸಕರ ಸಹಿಯೊಂದಿಗೆ ನಿರ್ಣಯ ಮಂಡನೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಠಾಕ್ರೆ ಬಣದಿಂದಲೂ ಬಂಡಾಯ ಶಾಸಕರ ಅನರ್ಹತೆಗೆ ಸಿದ್ಧತೆ
ಇತ್ತ ಸಿಎಂ ಉದ್ದವ್ ಠಾಕ್ರೆ ಬಣದಿಂದಲೂ ಬಂಡಾಯ ಶಾಸಕರ ಅನರ್ಹತೆಗೆ ಸಿದ್ಧತೆ ನಡೆಸಲಾಗಿದ್ದು, ಶಿವಸೇನೆ ಮನವಿ ಮಾಡಿದಂತೆ16 ಬಂಡಾಯ ಶಾಸಕರ ಅನರ್ಹತೆ ಒಳಗೊಂಡಿರುವ ಮತ್ತು ಪ್ರಸ್ತುತ ರಾಜಕೀಯ ಬಿಕ್ಕಟ್ಟಿನ ಕುರಿತು ಕಾನೂನು ಅಭಿಪ್ರಾಯ ಪಡೆಯಲು ಮಹಾರಾಷ್ಟ್ರ ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ ಅವರನ್ನು ವಿಧಾನಸಭೆ ಕಾರ್ಯದರ್ಶಿ ಕರೆದಿದ್ದಾರೆ. ಈ ಸಂಬಂಧ ಇಂದು ಮಹತ್ವದ ಚರ್ಚೆ ನಡೆಸಿದ್ದಾರೆ.

ಅಂತೆಯೇ ಅತ್ತ ಉದ್ಧವ್ ಠಾಕ್ರೆ ನಿವಾಸ ಮಾತೋಶ್ರೀಯಲ್ಲಿ ಶಿವಸೇನೆ ಶಾಸಕರ ಮಹತ್ವದ ಸಭೆ ಕೂಡ ನಡೆಯುತ್ತಿದ್ದು ಸಂಭಾವ್ಯ ಬಹುಮತ ಸಾಬೀತಿಗೆ ಕಾರ್ಯತಂತ್ರ ಹೆಣೆಯಲಾಗುತ್ತಿದೆ.
 

SCROLL FOR NEXT