ದೇಶ

ಪಕ್ಷ ಬಿಟ್ಟು ಹೋಗಲು ಇಚ್ಛಿಸುವವರು ಹೋಗಲಿ... ನಾನು ಹೊಸ ಶಿವಸೇನೆ ಕಟ್ಟುತ್ತೇನೆ: ಸಿಎಂ ಉದ್ಧವ್ ಠಾಕ್ರೆ

Srinivas Rao BV

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶುಕ್ರವಾರ ರಾತ್ರಿ ಬಂಡಾಯ ನಾಯಕ ಏಕನಾಥ್ ಶಿಂಧೆ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದಿದ್ದು ಪಕ್ಷಕ್ಕೆ ಮತ ಹಾಕಿದ ಶಿವಸೇನೆ ನಾಯಕರನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ ಮತ್ತು ಸೇನೆಯನ್ನು ಮುಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಪಕ್ಷದ ಕಾರ್ಪೊರೇಟರ್‌ಗಳನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಸಾಮಾನ್ಯ ಶಿವಸೇನೆ ಕಾರ್ಯಕರ್ತರು ನಮ್ಮ ಸಂಪತ್ತು ಎಂದು ಹೇಳಿದ ಅವರು ತಮ್ಮೊಂದಿಗೆ ಅವರು ಇರುವವರೆಗೂ ತಾನು ಇತರರ ಟೀಕೆಗಳಿಗೆ ಹೆದರುವುದಿಲ್ಲ ಎಂದರು.

ಗುವಾಹಟಿಯಲ್ಲಿ ಮೊಕ್ಕಾಂ ಹೂಡಿರುವ ಏಕನಾಥ್ ಶಿಂಧೆ ಅವರನ್ನು ಸೇನೆಯ ಬಹುಪಾಲು ಶಾಸಕರು ಸೇರಿಕೊಂಡ ನಂತರ ಸರ್ಕಾರವು ಬಿಕ್ಕಟ್ಟನ್ನು ಎದುರಿಸುತ್ತಿದ್ದಂತೆ ಶಿವಸೇನೆಯು ಅದರ ಸ್ವಂತ ಜನರಿಂದ ದ್ರೋಹಕ್ಕೆ ಒಳಗಾಗಿದೆ ಎಂದು ಅವರು ಹೇಳಿದರು.

ನಿಮ್ಮಲ್ಲಿ ಹಲವರು ಆಕಾಂಕ್ಷಿಗಳಾಗಿದ್ದರೂ ನಾವು ಈ ಬಂಡಾಯಗಾರರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದ್ದೇವೆ. ಈ ಜನರು ನಿಮ್ಮ ಕಠಿಣ ಪರಿಶ್ರಮದಿಂದ ಆಯ್ಕೆಯಾದ ನಂತರ ಅಸಮಾಧಾನಗೊಂಡಿದ್ದಾರೆ ಮತ್ತು ಈ ನಿರ್ಣಾಯಕ ಸಮಯದಲ್ಲಿ ನೀವು ಪಕ್ಷದ ಪರವಾಗಿ ನಿಂತಿದ್ದೀರಿ. ನಾನು ನಿಮಗೆ ಕೇವಲ ಧನ್ಯವಾದ ಹೇಳಿದರೆ ಸಾಲದು ಎಂದು ಶಿವಸೇನಾ ಅಧ್ಯಕ್ಷರೂ ಆಗಿರುವ ಠಾಕ್ರೆ ಪಕ್ಷದ ಕಾರ್ಯಕರ್ತರಿಗೆ ಹೇಳಿದರು.

ಮೈತ್ರಿ ಪಾಲುದಾರರ ಬಗ್ಗೆ ಇರುವ ದೂರುಗಳನ್ನು ಪರಿಶೀಲಿಸುವಂತೆ ಏಕನಾಥ್ ಶಿಂಧೆ ಅವರಿಗೆ ಹೇಳಿದ್ದೆ. ಶಿವಸೇನೆ ಬಿಜೆಪಿ ಜತೆ ಕೈಜೋಡಿಸುವಂತೆ ಶಾಸಕರು ಒತ್ತಡ ಹೇರುತ್ತಿದ್ದಾರೆ ಎಂದು ಅವರು ತಿಳಿಸಿದ್ದರು. ಈ ಶಾಸಕರನ್ನು ನನ್ನ ಬಳಿಗೆ ಕರೆತನ್ನಿ, ಈ ಬಗ್ಗೆ ಚರ್ಚಿಸೋಣ ಎಂದು ಹೇಳಿದ್ದೆ. ಬಿಜೆಪಿ ನಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದೆ, ಭರವಸೆಗಳನ್ನು ಈಡೇರಿಸಿಲ್ಲ. ಅನೇಕ ಬಂಡುಕೋರರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಹಾಗಾಗಿ ಬಿಜೆಪಿ ಜೊತೆ ಹೋದರೆ ಕ್ಲೀನ್ ಆಗ್ತಾರೆ, ನಮ್ಮ ಜೊತೆ ಇದ್ದರೆ ಜೈಲಿಗೆ ಹೋಗ್ತಾರೆ. ಇದು ಸ್ನೇಹದ ಸಂಕೇತವೇ?” ಎಂದು ಠಾಕ್ರೆ ಪ್ರಶ್ನಿಸಿದರು.

ಪಕ್ಷವನ್ನು ನಡೆಸಲು ನಾನು ಅಸಮರ್ಥನು ಎಂದು ಶಿವಸೇನಾ ಕಾರ್ಯಕರ್ತರು ಭಾವಿಸಿದರೆ, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದರು. ಶಿವಸೇನೆ ಒಂದು ಸಿದ್ಧಾಂತವಾಗಿದೆ. ಹಿಂದೂ ಮತ ಬ್ಯಾಂಕ್ ಅನ್ನು ಯಾರೊಂದಿಗೂ ಹಂಚಿಕೊಳ್ಳಲು ಬಯಸದ ಕಾರಣ ಬಿಜೆಪಿ ಅದನ್ನು ಮುಗಿಸಲು ಬಯಸುತ್ತದೆ ಎಂದು ಅವರು ಹೇಳಿದರು. ಹಿಂದುತ್ವದ ಮತಗಳಲ್ಲಿ ವಿಭಜನೆಯಾಗಬಾರದೆಂದು ದಿವಂಗತ ಬಾಳ್ ಠಾಕ್ರೆ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಪ್ರಾರಂಭಿಸಿದರು ಎಂದು ಸ್ಮರಿಸಿದರು.

ಬಂಡಾಯ ಗುಂಪಿಗೆ ಬಿಜೆಪಿ ಸೇರುವುದನ್ನು ಬಿಟ್ಟು ಬೇರೆ ದಾರಿಯಿಲ್ಲ, ಸರ್ಕಾರ ರಚಿಸುವಲ್ಲಿ ಯಶಸ್ವಿಯಾದರೂ ಅದು ಹೆಚ್ಚು ಕಾಲ ಉಳಿಯುವುದಿಲ್ಲ . ಏಕೆಂದರೆ ಅವರಲ್ಲಿ ಅನೇಕ ಶಾಸಕರು ನಿಜವಾಗಿಯೂ ಸಂತೋಷವಾಗಿಲ್ಲ ಎಂದು ಅವರು ಹೇಳಿದರು. ಮುಂದಿನ ಚುನಾವಣೆಯಲ್ಲಿ ಬಂಡುಕೋರರು ಗೆಲ್ಲಲು ಸಾಧ್ಯವಿಲ್ಲ ಎಂದು ಸಿಎಂ ಉದ್ಧವ್ ಠಾಕ್ರೆ ಹೇಳಿದರು.

ಶಿಂಧೆ ಮತ್ತು ಬಿಜೆಪಿಯನ್ನು ಗುರಿಯಾಗಿಸಿಕೊಂಡು ಮಾತನಾಡಿದ ಉದ್ಧವ್ ಠಾಕ್ರೆ, ಶಿವಸೇನೆಯ ಮತದಾರರನ್ನು ಸೆಳೆಯಿರಿ ನೋಡೋಣವೆಂದು ಸವಾಲು ಹಾಕಿದರು. ಚುನಾವಣೆಯಲ್ಲಿ ಆಯ್ಕೆಯಾದವರನ್ನು ನೀವು ಕಿತ್ತುಕೊಂಡಿದ್ದೀರಿ. ಆದರೆ ನಿಮಗೆ ಧೈರ್ಯವಿದ್ದರೆ, ನಿಮ್ಮನ್ನು ಆಯ್ಕೆ ಮಾಡಿದವರನ್ನು ಕರೆದುಕೊಂಡು ಹೋಗಲುು ಪ್ರಯತ್ನಿಸಿ ಎಂದು ಟಾಲೆಂಜ್ ಮಾಡಿದರು. ಹೊರಹೋಗಲು ಬಯಸುವವರು ಮುಕ್ತವಾಗಿ ಹೋಗಲು ಸ್ವತಂತ್ರರು. ನಾನು ಹೊಸ ಶಿವಸೇನೆಯನ್ನು ರಚಿಸುತ್ತೇನೆ ಎಂದು ಠಾಕ್ರೆ ಗುಡುಗಿದರು.

SCROLL FOR NEXT