ದೇಶ

ಮಹಾ ಬಿಕ್ಕಟ್ಟು: ಶಿಂಧೆ ಬಣ ಸೇರಿದ ಮತ್ತೊಬ್ಬ ಮಿನಿಸ್ಟರ್; ಧೈರ್ಯವಿದ್ದರೆ ಚುನಾವಣೆ ಎದುರಿಸಿ ಎಂದ ಆದಿತ್ಯ ಠಾಕ್ರೆ

Lingaraj Badiger

ಮುಂಬೈ: ಕ್ಷಣಕ್ಷಣಕ್ಕೂ ರೋಚಕ ತಿರುವು ಪಡೆಯುತ್ತಿರೋ ಮಹಾರಾಷ್ಟ್ರ ಸರ್ಕಾರದ ರಾಜಕೀಯದಲ್ಲಿ ಸಿಎಂ ಉದ್ಧವ್ ಠಾಕ್ರೆ ಶಿವಸೇನೆ ಬಣದ ಸಂಖ್ಯೆ ಕ್ಷಣ ಕ್ಷಣಕ್ಕೂ ಕುಸಿಯುತ್ತಿದೆ. ಭಾನುವಾರ ಮತ್ತೊಬ್ಬ ಸಚಿವರು ಏಕನಾಥ್ ಶಿಂಧೆ ಬಣವನ್ನ ತಲುಪಿದ್ದಾರೆ.

ಇಂದು ಮಧ್ಯಾಹ್ನ, ಉದಯ್ ಸಾವಂತ್ ಅವರು ಅಸ್ಸಾಂನ ಗುವಾಹಟಿಗೆ ಬಂದಿಳಿದು ಬಂಡಾಯ ಶಾಸಕರ ಜೊತೆ ಸೇರಿಕೊಂಡರು. ಇದರೊಂದಿಗೆ ಬಂಡಾಯ ಪಾಳಯಕ್ಕೆ ಸೇರಿದ ಮಹಾರಾಷ್ಟ್ರದ ಒಂಬತ್ತನೇ ಸಚಿವರಾಗಿದ್ದಾರೆ. ಬಂಡುಕೋರರು ತಾವು ಮೂರನೇ ಎರಡರಷ್ಟು ಬಹುಮತವನ್ನು ಹೊಂದಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದು ಅನರ್ಹತೆಯ ಕಾನೂನುಗಳನ್ನು ಅನ್ವಯಿಸದೆ ವಿಧಾನಸಭೆಯಲ್ಲಿ ಪಕ್ಷವನ್ನು ವಿಭಜಿಸಲು ಅನುವು ಮಾಡಿಕೊಡುತ್ತದೆ.

ಏಕನಾಥ್ ಶಿಂಧೆ ಬಣದಲ್ಲಿ ಸಂಖ್ಯೆ ಹೆಚ್ಚಾಗ್ತಿದ್ದಂತೆ ಸಿಎಂ ಉದ್ಧವ್ ಠಾಕ್ರೆ ಪರ ಬೆಂಬಲಿಗರು ಸತತ ಎರಡನೇ ದಿನವೂ ಮುಂಬೈ ಮತ್ತು ಪುಣೆಯಲ್ಲಿ ಇಂದು ಬೈಕ್ ರ್ಯಾಲಿ ನಡೆಸಿ ರೆಬೆಲ್ಸ್ ಶಾಸಕರ ವಿರುದ್ಧ ಪ್ರತಿಭಟಿಸಿದರು.

ಇಂದು ಮತ್ತೊಮ್ಮೆ ಬಂಡಾಯ ಶಾಸಕರಿಗೆ ಎಚ್ಚರಿಕೆ ನೀಡಿದ ಆದಿತ್ಯ ಠಾಕ್ರೆ,  ನಿಮಗೆ ಧೈರ್ಯವಿದ್ದರೆ ಶಿವಸೇನೆ ಪಕ್ಷ ತೊರೆದು ರಾಜೀನಾಮೆ ನೀಡಿ ಚುನಾವಣೆ ಎದುರಿಸಿ. ಬಂಡಾಯವೆದ್ದಿರುವ ಪ್ರತಿಯೊಬ್ಬ ಶಾಸಕರಿಗೂ ಎರಡು ಆಯ್ಕೆಗಳಿವೆ. ಬಿಜೆಪಿಗೆ ಸೇರಿಕೊಳ್ಳಿ ಅಥವಾ ಪ್ರಹಾರ್ ಸೇರಿಕೊಳ್ಳಿ. ಅವರು ಶಿವಸೇನೆ ಅಥವಾ ಬಿಲ್ಲು ಬಾಣದ ಚಿಹ್ನೆಗೆ ಅರ್ಹರಲ್ಲ” ಎಂದು ಹೇಳಿದ್ದಾರೆ.

ಪಕ್ಷದ ರಾಷ್ಟ್ರೀಯ ಯುವ ಕಾರ್ಯಕಾರಿಣಿ ಸಭೆಯಲ್ಲಿ ಸೇನಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗ ಅವರು ಅಪಹರಣಕ್ಕೊಳಗಾಗಿದ್ದಾರೆಂದು ಭಾವಿಸುತ್ತಿದ್ದಾರೆ. ಈಗ ಅವರು ಅಲ್ಲಿ ಕೈದಿಗಳಾಗಿದ್ದಾರೆ. ಕೆಲವು ನಾಯಕರನ್ನು ಬಸ್‌ಗಳಿಗೆ ತಳ್ಳಲಾಯಿತು ಎಂದು ಹೇಳಿದರು. ಪಕ್ಷದ ಕಾರ್ಯಕರ್ತರು ಬೀದಿಗಿಳಿದು ನಿಜವಾದ ಹುಲಿಗಳಂತೆ ಇರುವಂತೆ ಆದಿತ್ಯ ಠಾಕ್ರೆ ಒತ್ತಾಯಿಸಿದರು. ನಾವು ಬೀದಿಗಿಳಿದು ಪ್ರತಿ ಮನೆಯನ್ನು ತಲುಪಬೇಕು, ನಾವು ನಿಜವಾದ ಹುಲಿಗಳಂತಿರಬೇಕು ಎಂದು ಅವರು ಹೇಳಿದರು.

ಮತ್ತೊಂದು ಬೆಳವಣಿಗೆಯಲ್ಲಿ ಶರದ್ ಪವಾರ್ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕರು, ಕಾಂಗ್ರೆಸ್ ಸಚಿವರಾದ ಬಾಳಾಸಾಹೇಬ್ ಥೋರಟ್ ಮತ್ತು ಅಶೋಕ್ ಚವಾಣ್ ಮತ್ತು ಶಿವಸೇನೆಯ ಅನಿಲ್ ಪರಬ್ ಮತ್ತು ಅನಿಲ್ ದೇಸಾಯಿ ಅವರನ್ನು ಭೇಟಿಯಾಗಿ ಆರು ದಿನಗಳಿಂದ ನಡೆಯುತ್ತಿರುವ ರಾಜಕೀಯದ ಬಗ್ಗೆ ಚರ್ಚಿಸಿದರು.

SCROLL FOR NEXT