ದೇಶ

ವಿಶ್ವಾಸಮತಯಾಚನೆಗೆ ತಡೆ ನೀಡಲು ಸುಪ್ರೀಂ ನಕಾರ, ಸಿಎಂ ಠಾಕ್ರೆ ನಾಳೆಯೇ ಬಹುಮತ ಸಾಬೀತಪಡಿಸಬೇಕು

Lingaraj Badiger

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಗುರುವಾರ ವಿಶ್ವಾಸಮತ ಯಾಚಿಸುವಂತೆ ಸೂಚನೆ ನೀಡಿರುವ ಮಹಾರಾಷ್ಟ್ರ ರಾಜ್ಯಪಾಲರ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ ಮತ್ತು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರ ನಿರ್ದೇಶನದಂತೆ ನಾಳೆಯೇ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಸೂಚಿಸಿದೆ. 

ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರಕ್ಕೆ ಗುರುವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವಂತೆ ಮಹಾರಾಷ್ಟ್ರ ರಾಜ್ಯಪಾಲರು ನೀಡಿದ ನಿರ್ದೇಶನವನ್ನು ಶಿವಸೇನೆಯ ಮುಖ್ಯ ಸಚೇತಕ ಸುನೀಲ್ ಪ್ರಭು ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಶಿವಸೇನಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆ ಬಿ ಪರ್ದಿವಾಲಾ ಅವರು, ರಾಜ್ಯಪಾಲರ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ್ದಾರೆ. ಆದರೆ ವಿಶ್ವಾಸಮತದ ಫಲಿತಾಂಶ ಶಿವಸೇನೆಯ ಮುಖ್ಯ ಸಚೇತಕ ಸುನೀಲ್ ಪ್ರಭು ಅವರ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ. ಜುಲೈ 11 ರಂದು ಪ್ರಭು ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.

ಶಿವಸೇನೆಯ ಮುಖ್ಯ ಸಚೇತಕ ಸುನೀಲ್ ಪ್ರಭು ಅವರು ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆ ಮಾಡಿದ್ದು, ರಾಜ್ಯಪಾಲರು ಶಬ್ದಾತೀತ ವೇಗದಲ್ಲಿ ಓಡುವ ಕುದುರೆಯಂತೆ ನಿರ್ಧಾರ ಕೈಗೊಂಡಿದ್ದಾರೆ ಎಂದು ಟೀಕಿಸಿದ್ದಾರೆ. 

SCROLL FOR NEXT