ದೇಶ

ಅಕ್ರಮ ಹಣ ವರ್ಗಾವಣೆ ಪ್ರಕರಣ: ವಿಕಾಸ್ ದುಬೆ, ಆತನ ಸಹಚರರ ಆಸ್ತಿ ಜಪ್ತಿ ಮಾಡಿದ ಇಡಿ

Lingaraj Badiger

ನವದೆಹಲಿ: ಹತ್ಯೆಗೀಡಾದ ಉತ್ತರ ಪ್ರದೇಶದ ದರೋಡೆಕೋರ ವಿಕಾಸ್ ದುಬೆ, ಆತನ ಕುಟುಂಬ ಮತ್ತು ಸಹಚರರಿಗೆ ಸೇರಿದ 10 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇಡಿ) ಬುಧವಾರ ತಿಳಿಸಿದೆ.

ಪಿಎಂಎಲ್‌ಎ ಕಾಯ್ದೆ ಅಡಿ ಕಾನ್ಪುರ ಮತ್ತು ಲಖನೌದಲ್ಲಿರುವ ಒಟ್ಟು 28 ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ತಾತ್ಕಾಲಿಕ ಆದೇಶವನ್ನು ಹೊರಡಿಸಲಾಗಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.

ಒಟ್ಟು 10.12 ಕೋಟಿ ಮೌಲ್ಯದ ಈ ಆಸ್ತಿಗಳು ವಿಕಾಸ್ ದುಬೆ, ಅವರ ಕುಟುಂಬ ಸದಸ್ಯರು, ಸಹಾಯಕ ಜೈಕಾಂತ್ ಬಾಜಪೇಯ್ ಮತ್ತು ಅವರ ಕುಟುಂಬ ಸದಸ್ಯರು ಹಾಗೂ ಅವರ(ದುಬೆ ಅವರ) ಸಹಚರರ ಹೆಸರಿನಲ್ಲಿದೆ. ಈ ಆಸ್ತಿಗಳನ್ನು ವಿಕಾಸ್ ದುಬೆ ಅಪರಾಧ ಚಟುವಟಿಕೆಗಳಿಂದ ಗಳಿಸಿದ್ದಾರೆ" ಎಂದು ಇಡಿ ಹೇಳಿದೆ.

ಉತ್ತರ ಪ್ರದೇಶ ಪೊಲೀಸರು ಜುಲೈ 10, 2020 ರಂದು ಬೆಳಗ್ಗೆ ಉಜ್ಜಯಿನಿಯಿಂದ ಕಾನ್ಪುರಕ್ಕೆ ದುಬೆಯನ್ನು ಕರೆದೊಯ್ಯುತ್ತಿದ್ದಾಗ ಪೊಲೀಸ್ ವಾಹನ ಅಪಘಾತಕ್ಕೀಡಾಗಿತ್ತು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ದುಬೆಯನ್ನು ಎನ್‌ಕೌಂಟರ್‌ ಮಾಡಲಾಗಿತ್ತು.

ದುಬೆಯ ಎನ್‌ಕೌಂಟರ್‌ಗೂ ಮೊದಲು, ಪ್ರತ್ಯೇಕ ಪೊಲೀಸ್ ಎನ್‌ಕೌಂಟರ್‌ಗಳಲ್ಲಿ ಆತನ ಐವರು ಸಹಚರರನ್ನು ಹತ್ಯೆ ಮಾಡಲಾಗಿತ್ತು.

SCROLL FOR NEXT