ದೇಶ

ರಾಜ್ಯಪಾಲರಿಂದ ವಿವಿ ಕುಲಪತಿ ಹುದ್ದೆ ಅಧಿಕಾರ ತೆಗೆದುಹಾಕಲು ಸುಗ್ರೀವಾಜ್ಞೆ ತರಲು ಕೇರಳ ಸರ್ಕಾರ ನಿರ್ಧಾರ

Sumana Upadhyaya

ತಿರುವನಂತಪುರಂ: ಕೇರಳದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್(Kerala Governor Arif Mohammed Khan) ಮತ್ತು ಎಲ್‌ಡಿಎಫ್ ಸರ್ಕಾರದ ನಡುವಿನ ಸಂಘರ್ಷ ಮತ್ತೊಂದು ಹಂತಕ್ಕೆ ತಲುಪಿದೆ. ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಯಿಂದ ರಾಜ್ಯಪಾಲರನ್ನು ಪದಚ್ಯುತಗೊಳಿಸಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ತರಲು ನಿರ್ಧರಿಸಿದೆ. ಇಂದು ಬುಧವಾರ ತಿರುವನಂತಪುರದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ನಿರ್ಧಾರವನ್ನು ದೃಢಪಡಿಸಿದ ಕೇರಳ ಉನ್ನತ ಶಿಕ್ಷಣ ಸಚಿವ ಆರ್ ಬಿಂದು, ಸುಗ್ರೀವಾಜ್ಞೆಯಿಂದ ಇನ್ನು ಮುಂದೆ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳಾಗಿ ಖ್ಯಾತ ಶಿಕ್ಷಣ ತಜ್ಞರನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು. ಈ ನಿರ್ಧಾರವು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರ ಸುಧಾರಣೆಗಳ ಭಾಗವಾಗಿದೆ ಎಂದು ಸಮರ್ಥಿಸಿಕೊಂಡಿದ್ದು, ಸುಗ್ರೀವಾಜ್ಞೆಗೆ ರಾಜ್ಯಪಾಲರ ಒಪ್ಪಿಗೆ ಸಿಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಇತ್ತೀಚೆಗೆ, ಸರ್ಕಾರವು ನೇಮಿಸಿದ ಆಯೋಗವು ಕುಲಪತಿಯು ಜೀವಮಾನದ ಶ್ರೇಷ್ಠತೆ ಮತ್ತು ನಾಯಕತ್ವದ ಮೂಲಕ ಸಾರ್ವಜನಿಕ ಜೀವನದಲ್ಲಿ ತನ್ನನ್ನು ಗುರುತಿಸಿಕೊಂಡಿರುವ ಶ್ರೇಷ್ಠ ವ್ಯಕ್ತಿ ಎಂದು ಶಿಫಾರಸು ಮಾಡಿದೆ.

ಇತ್ತೀಚೆಗೆ ಉಪಕುಲಪತಿಗಳ ನೇಮಕದಲ್ಲಿ ರಾಜ್ಯಪಾಲ ಆರಿಫ್ ಖಾನ್ ಅವರ ಮಧ್ಯಸ್ಥಿಕೆಯೇ ರಾಜ್ಯಪಾಲರನ್ನು ಕುಲಪತಿ ಹುದ್ದೆಯಿಂದ ಕೆಳಗಿಳಿಸುವ ಆಯೋಗದ ಶಿಫಾರಸನ್ನು ಜಾರಿಗೊಳಿಸಲು ಸರ್ಕಾರ ನಿರ್ಧರಿಸುವುದಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ಯುಜಿಸಿ ನಿಯಮಾವಳಿಗಳನ್ನು ಉಲ್ಲಂಘಿಸಿ ಉಪ ಕುಲಪತಿಗಳ ನೇಮಕ ಅನೂರ್ಜಿತವಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ರಾಜ್ಯಪಾಲರು 10 ಉಪಕುಲಪತಿಗಳನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದರು.

ಈ ಹಿಂದೆ, ಉಪಕುಲಪತಿ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರದ ಜೊತೆಗಿನ ಸಂಘರ್ಷದಲ್ಲಿ ತಮ್ಮನ್ನು ಕುಲಪತಿ ಹುದ್ದೆಯಿಂದ ತೆಗೆದುಹಾಕುವ ಸುಗ್ರೀವಾಜ್ಞೆ ಸರ್ಕಾರ ತಂದರೆ ಅದಕ್ಕೆ ಸಹಿ ಹಾಕಲು ಸಿದ್ಧ ಎಂದು ರಾಜ್ಯಪಾಲ ಖಾನ್ ಹೇಳಿದ್ದರು. ಅಲ್ಲದೆ ಕುಲಪತಿ ಪಾತ್ರವನ್ನು ವಹಿಸಿಕೊಳ್ಳುವಂತೆ ಮುಖ್ಯಮಂತ್ರಿಯನ್ನು ಕೇಳಿದರು. ಆದರೆ, ಸರ್ಕಾರವು ರಾಜ್ಯಪಾಲರ ಮನವೊಲಿಸಿ ಹುದ್ದೆಯಲ್ಲಿ ಮುಂದುವರಿಯುವಂತೆ ಮಾಡಿತು. ಇತ್ತೀಚಿನ ತಿಂಗಳುಗಳಲ್ಲಿ ರಾಜ್ಯಪಾಲರೊಂದಿಗಿನ  ಸಂಘರ್ಷ ತೀವ್ರಗೊಂಡ ನಂತರ ಸರ್ಕಾರದ ನಿಲುವು ಬದಲಾಯಿತು.

SCROLL FOR NEXT