ದೇಶ

ಗುಜರಾತ್ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ: 10 ಲಕ್ಷ ಉದ್ಯೋಗ, ಉಚಿತ ವಿದ್ಯುತ್ ಭರವಸೆ

Lingaraj Badiger

ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಗೆ ಪ್ರತಿಪಕ್ಷ ಕಾಂಗ್ರೆಸ್ ಶನಿವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಸರ್ಕಾರಿ ಮತ್ತು ಅರೆ ಸರ್ಕಾರಿ ಇಲಾಖೆಗಳಲ್ಲಿ ಹತ್ತು ಲಕ್ಷ ಉದ್ಯೋಗಗಳು, 10 ಲಕ್ಷ ರೂ. ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ, 500 ರೂ. ಗೆ ಎಲ್‌ಪಿಜಿ ಸಿಲಿಂಡರ್ ಮತ್ತು ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ.

ಇಂದು ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ, ಎರಡು ದಶಕಗಳಿಗೂ ಹೆಚ್ಚು ಕಾಲ ಗುಜರಾತ್ ನಲ್ಲಿ ಅಧಿಕಾರದಿಂದ ದೂರವಿರುವ ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ ತಿಂಗಳಿಗೆ 3,000 ರೂ. ನಿರುದ್ಯೋಗ ಭತ್ಯೆ, ದಿವ್ಯಾಂಗರು, ವಿಧವೆಯರು, ಹಿರಿಯ ನಾಗರಿಕರು ಮತ್ತು ನಿರ್ಗತಿಕ ಮಹಿಳೆಯರಿಗೆ ರೂ 2,000 ಪಿಂಚಣಿ ನೀಡುವುದಾಗಿ ಭರವಸೆ ನೀಡಿದೆ.

ರಾಜ್ಯದ ಎಲ್ಲಾ ಮೀನುಗಾರರ ಮೂರು ಲಕ್ಷ ರೂ.ವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ.

ರಾಜಸ್ಥಾನ ಮುಖ್ಯಮಂತ್ರಿ ಹಾಗೂ ಗುಜರಾತ್ ಚುನಾವಣೆಯ ಕಾಂಗ್ರೆಸ್‌ನ ಹಿರಿಯ ವೀಕ್ಷಕ ಅಶೋಕ್ ಗೆಹ್ಲೋಟ್ ಅವರು ಪಕ್ಷದ ಇತರ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 1 ಮತ್ತು 5 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.

SCROLL FOR NEXT