ದೇಶ

ಉತ್ತರಾಖಂಡದ ಚಮೋಲಿಯಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ವಾಹನ, 12 ಮಂದಿ ಸಾವು

Lingaraj Badiger

ಚಮೋಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಶುಕ್ರವಾರ ಪ್ರಯಾಣಿಕರ ವಾಹನವೊಂದು ಆಳವಾದ ಪ್ರಪಾತಕ್ಕೆ ಉರುಳಿಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಸೇರಿದಂತೆ 12 ಜನ ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ ತಿಳಿಸಿದೆ.

17 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಟಾಟಾ ಸುಮೋ, ಜಿಲ್ಲೆಯ ಜೋಶಿಮಠ ಪ್ರದೇಶದ ಉರ್ಗಾಮ್ ಎಂಬಲ್ಲಿ ಸಂಜೆ 4 ಗಂಟೆ ಸುಮಾರಿಗೆ ಕಮರಿಗೆ ಬಿದ್ದಿದೆ ಎಂದು ರಕ್ಷಣಾ ಕಾರ್ಯಾಚರಣೆ ನಡೆಸಿದ ಎಸ್‌ಡಿಆರ್‌ಎಫ್ ತಿಳಿಸಿದೆ.

ಪ್ರಯಾಣಿಕರು ಜೋಶಿಮಠದಿಂದ ಪಲ್ಲಾ ಜಖೋಲ್ ಗ್ರಾಮಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಚಮೋಲಿ ಎಸ್ಪಿ ಪ್ರಮೇಂದ್ರ ದೋಭಾಲ್ ಹೇಳಿದ್ದಾರೆ.

ಎಸ್ ಡಿಆರ್ ಎಫ್ ಎಲ್ಲಾ 12 ಮೃತದೇಹಗಳನ್ನು ಹೊರತೆಗೆದಿದೆ.

ಸುಮಾರು 300 ಮೀಟರ್ ಆಳವಾದ ಪ್ರಪಾತಕ್ಕೆ ವಾಹನ ಉರುಳಿ ಬಿದ್ದಿದ್ದು, ವಾಹನದ ಅವಶೇಷಗಳು ಬಿದ್ದಿರುವ ಸ್ಥಳಕ್ಕೆ ತಲುಪುವುದು ಕಷ್ಟಕರವಾಗಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ದೂರವಾಣಿ ಮೂಲಕ ಪಿಟಿಐಗೆ ತಿಳಿಸಿದ್ದಾರೆ.

ವಾಹನದ ಮೇಲ್ಛಾವಣಿಯ ಮೇಲೆ ಕೆಲವು ಪ್ರಯಾಣಿಕರು ಕುಳಿತುಕೊಂಡಿದ್ದರಿಂದ ವಾಹನ ಓವರ್‌ಲೋಡ್‌ ಆಗಿತ್ತು ಎಂದು ಹೇಳಲಾಗುತ್ತಿದೆ.

SCROLL FOR NEXT