ದೇಶ

ಟಿಆರ್ ಎಸ್ ಶಾಸಕರ ಖರೀದಿ ಪ್ರಕರಣ: ಬಿ.ಎಲ್.ಸಂತೋಷ್‌ಗೆ ಸಮನ್ಸ್, ಖುದ್ದು ಹಾಜರಾಗುವಂತೆ ಎಸ್ಐಟಿ ಸೂಚನೆ

Lingaraj Badiger

ಹೈದರಾಬಾದ್‌: ಬಿಜೆಪಿ ಸೇರುವಂತೆ ಟಿಆರ್‌ಎಸ್‌ ಶಾಸಕರಿಗೆ ಹಣದ ಆಮಿಷವೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್‌ ಅವರಿಗೆ ವಿಶೇಷ ತನಿಖಾ ತಂಡ(ಎಸ್‌ಐಟಿ) ಶುಕ್ರವಾರ ಸಮನ್ಸ್ ಜಾರಿಗೆ ಮಾಡಿದೆ.

ನವೆಂಬರ್‌ 21ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಬಿ.ಎಲ್​ ಸಂತೋಷ್​ ಅವರಿಗೆ ಹೈದರಾಬಾದ್‌ ಎಸ್‌ಐಟಿ ಸಮನ್ಸ್ ಜಾರಿಗೊಳಿಸಿದ್ದು, ವಿಚಾರಣೆಗೆ ಹಾಜರಾಗದಿದ್ದರೆ ಬಂಧಿಸುವುದಾಗಿ ಎಚ್ಚರಿಕೆ ಸಹ ನೀಡಿದೆ.

ಎಸ್ಐಟಿ ಸೆಕ್ಷನ್ 41(ಎ) ಅಡಿಯಲ್ಲಿ ಬಿಜೆಪಿ ನಾಯಕನಿಗೆ ನೋಟಿಸ್ ನೀಡಿದೆ. ಸಂತೋಷ್ ಅವರು ಹೇಳಿದ ದಿನಾಂಕ ಮತ್ತು ಸಮಯದಂದು ಎಸ್‌ಐಟಿ ಮುಂದೆ ಹಾಜರಾಗಲು ವಿಫಲವಾದರೆ ಅವರನ್ನು ಬಂಧಿಸಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಅಕ್ಟೋಬರ್ 26ರಂದು ತೆಲಂಗಾಣದ ಸೈಬರಾಬಾದ್ ಪೊಲೀಸರು ಅಝಿಜ್ ನಗರದ ಫಾರ್ಮ್ ಹೌಸ್ ಮೇಲೆ‌ ದಾಳಿ ಮಾಡಿದ್ದರು. ಈ ವೇಳೆ ಬರೋಬ್ಬರಿ 15 ಕೋಟಿ ರೂ. ಹಣವನ್ನು ಸೀಜ್ ಮಾಡಿದ್ದರು. ಅಲ್ಲದೇ ಆಪರೇಷನ್ ಕಮಲಕ್ಕೆ ಈ ಹಣ ತರಲಾಗಿತ್ತು ಎನ್ನಲಾಗಿತ್ತು. ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್‌ಎಸ್) ನಾಲ್ವರು ಶಾಸಕರಿಗೆ ಪಕ್ಷ ಬದಲಿಸಲು ಬಿಜೆಪಿ ಹಣದ ಆಮಿಷ ಒಡ್ಡಲಾಗಿತ್ತು. ಶಾಸಕರನ್ನು ಖರೀದಿಸಲು ತಂದಿದ್ದು ಎನ್ನಲಾದ 15 ಕೋಟಿ ರೂ. ಹಣದ ಜೊತೆಗೆ ಮೂವರನ್ನು ಪೊಲೀಸರು ಬಂಧಿಸಿದ್ದರು.

SCROLL FOR NEXT