ದೇಶ

ರಾಜಸ್ಥಾನ: ಪಕ್ಷದ ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅಜಯ್ ಮಾಕೆನ್

Ramyashree GN

ಜೈಪುರ: ಬಂಡಾಯ ನಾಯಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದಕ್ಕಾಗಿ ಇತ್ತೀಚೆಗೆ ರಾಜಸ್ಥಾನದ ಪಕ್ಷದ ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ ಅವರನ್ನು ಡಿಸೆಂಬರ್ 5 ರ ಸರ್ದಾರ್ ಶಹರ್ ಉಪಚುನಾವಣೆಯ ಸ್ಟಾರ್ ಪ್ರಚಾರಕರನ್ನಾಗಿ ಮಾಡಲಾಗಿದೆ.

ಗುರುವಾರ ಬಿಡುಗಡೆಯಾದ 40 ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಮಾಕೆನ್ ಅವರ ಹೆಸರಿದೆ. ಆದರೆ, ಅಶೋಕ್ ಗೆಹ್ಲೋಟ್ ಬಣದ ರಾಜ್ಯ ಸಚಿವರಾದ ಮಹೇಶ್ ಜೋಶಿ, ಶಾಂತಿ ಧರಿವಾಲ್ ಮತ್ತು ಆರ್‌ಟಿಡಿಸಿ ಅಧ್ಯಕ್ಷ ಧರ್ಮೇಂದ್ರ ರಾಥೋಡ್ ಅವರು ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.

ಈಮಧ್ಯೆ, 40 ಹೆಸರುಗಳಲ್ಲಿ ಗೆಹ್ಲೋಟ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಕೂಡ ಸೇರಿದ್ದಾರೆ.

ನವೆಂಬರ್ 16 ರಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿರುವ ಮಾಕೆನ್, ತಮ್ಮ ಅಸಮರ್ಥತೆ ಮತ್ತು ಸ್ಥಾನದಲ್ಲಿ ಮುಂದುವರಿಯಲು ಇಷ್ಟವಿಲ್ಲ ಎಂದಿರುವ ಅವರು, ಸೆಪ್ಟೆಂಬರ್ 25 ರಂದು ರಾಜ್ಯದಲ್ಲಿ ನಡೆದ ಘಟನೆಗಳನ್ನು ಉಲ್ಲೇಖಿಸಿದ್ದಾರೆ.

ಮೂವರು ಶಾಸಕರಾದ ಮಹೇಶ್ ಜೋಶಿ, ಧರ್ಮೇಂದ್ರ ರಾಥೋಡ್ ಹಾಗೂ  ಶಾಂತಿ ಧರಿವಾಲ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಸೆಪ್ಟೆಂಬರ್ 25 ರಂದು ಅಶಿಸ್ತು ತೋರಿದ ಮೂವರು ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಗೆ ಗಮನ ಹರಿಸಲಾಗುತ್ತಿದೆ ಎಂದು ಮಾಕೆನ್ ಹೇಳಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಸೆಪ್ಟೆಂಬರ್ 25 ರಂದು ಕರೆದಿದ್ದ ಸಿಎಲ್‌ಪಿ ಸಭೆಯನ್ನು ಧಿಕ್ಕರಿಸಿದ್ದ ಗೆಹ್ಲೋಟ್ ಬಣದ ಶಾಸಕರು, ಸಮಾನಾಂತರವಾಗಿ ಮತ್ತೊಂದು ಸಭೆಯನ್ನು ನಡೆಸಿದರು. ಹೀಗಾಗಿ, ಅವರಿಗೆ ನೋಟಿಸ್ ನೀಡಲಾಗಿತ್ತು. ಇದೀಗ, ಈ ನಾಯಕರಿಗೆ ಭಾರತ್ ಜೋಡೋ ಯಾತ್ರೆಗೆ ಟಾಸ್ಕ್ ನೀಡಲಾಗುತ್ತಿದ್ದು, ಮಾಕೆನ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಈಮಧ್ಯೆ, ಗೆಹ್ಲೋಟ್ ಬಣದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿರುವ ರಾಜ್ಯ ಸಚಿವ ರಾಜೇಂದ್ರ ಸಿಂಗ್ ಗುಧಾ ಮತ್ತು ಶಾಸಕಿ ದಿವ್ಯಾ ಮಡೆರ್ನಾ ಕೂಡ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಅಲ್ಲದೆ, ಪಂಜಾಬ್ ರಾಜ್ಯ ಉಸ್ತುವಾರಿ ಹರೀಶ್ ಚೌಧರಿ ಅವರ ಹೆಸರೂ ಪಟ್ಟಿಯಲ್ಲಿಲ್ಲ.

SCROLL FOR NEXT