ದೇಶ

ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್‌ ಗಾಂಧಿಗೆ ಫೂಲ್‌ಪ್ರೂಫ್ ಭದ್ರತೆ ಒದಗಿಸಲು ಬದ್ಧ: ಮಧ್ಯ ಪ್ರದೇಶದ ಸಚಿವ

Ramyashree GN

ಭೋಪಾಲ್: ಭಾರತ್ ಜೋಡೋ ಯಾತ್ರೆಯ ವೇಳೆ ಇಂದೋರ್‌ನಲ್ಲಿ ಬಾಂಬ್ ಸ್ಫೋಟಿಸುವ ಬಗ್ಗೆ ಬೆದರಿಕೆಯೊಡ್ಡಿರುವ ಅನಾಮಧೇಯ ಪತ್ರದ ಒಂದು ದಿನದ ನಂತರ, ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು, ಈ ಪಾದಯಾತ್ರೆಯ ನೇತೃತ್ವ ವಹಿಸಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಪೂರ್ಣ ಪ್ರಮಾಣದ ಭದ್ರತೆ ಒದಗಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಶನಿವಾರ ಹೇಳಿದ್ದಾರೆ.

ಗುರುವಾರ ಸಂಜೆ ನಗರದ ಜುನಿ ಪ್ರದೇಶದಲ್ಲಿ ಸಿಹಿತಿಂಡಿ ಅಂಗಡಿಯೊಂದಕ್ಕೆ ಬೆದರಿಕೆ ಪತ್ರ ಬಂದಿದ್ದು, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯಲ್ಲಿ ಭಾಗವಹಿಸುವವರು ನವೆಂಬರ್ 28 ರಂದು ಖಾಲ್ಸಾ ಕ್ರೀಡಾಂಗಣದಲ್ಲಿ ಉಳಿದುಕೊಂಡರೆ ನಗರದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ.

1984 ರ ಸಿಖ್ ವಿರೋಧಿ ದಂಗೆಯನ್ನು ಉಲ್ಲೇಖಿಸಿರುವ ಪತ್ರವು, ರಾಹುಲ್ ಗಾಂಧಿ ಮತ್ತು ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದೆ.

ಬೆದರಿಕೆ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಮಿಶ್ರಾ, 'ಮಧ್ಯಪ್ರದೇಶದಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರಿಗೆ ಪೂರ್ಣ ಪ್ರಮಾಣದ ಭದ್ರತೆ ಒದಗಿಸುವ ಜವಾಬ್ದಾರಿಯನ್ನು ಸರ್ಕಾರ ಹೊಂದಿದೆ. ಭದ್ರತೆಯನ್ನು ಒದಗಿಸುವುದು ನಮ್ಮ ಬದ್ಧತೆ ಎಂದು ನಾನು ಅವರಿಗೆ ಭರವಸೆ ನೀಡಲು ಬಯಸುತ್ತೇನೆ' ಎಂದು ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಖಾಲ್ಸಾ ಕ್ರೀಡಾಂಗಣಕ್ಕೆ ಹೋಗುವ ಮೂಲಕ ಕಮಲ್ ನಾಥ್ ಅವರು 1984ರ ಸಿಖ್ ವಿರೋಧಿ ದಂಗೆಯ ಸಂತ್ರಸ್ತರ ಗಾಯಗಳಿಗೆ ಉಪ್ಪು ಸವರಿದ್ದಾರೆ. ಬಹುಶಃ ರಾಹುಲ್ ಗಾಂಧಿ ಅವರ ಯಾತ್ರೆ ರಾಜ್ಯಕ್ಕೆ ಬರುವುದು ನಾಥ್ ಅವರಿಗೆ ಇಷ್ಟವಿಲ್ಲ ಎಂದು ಸಚಿವರು ಆರೋಪಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 507 (ಅಪರಿಚಿತ ವ್ಯಕ್ತಿಯಿಂದ ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಶುಕ್ರವಾರ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ.

ನವೆಂಬರ್ 8 ರಂದು ಗುರುನಾನಕ್ ಜಯಂತಿಯ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ ಕಮಲ್ ನಾಥ್ ಅವರನ್ನು ಸನ್ಮಾನಿಸುವುದರ ಕುರಿತು ವಿವಾದ ಉಂಟಾದ ನಂತರ ಇಂದೋರ್‌ನ ಖಾಲ್ಸಾ ಕ್ರೀಡಾಂಗಣವು ಈ ತಿಂಗಳ ಆರಂಭದಲ್ಲಿ ಸುದ್ದಿಯಲ್ಲಿತ್ತು.

ಮಧ್ಯ ಪ್ರದೇಶದಲ್ಲಿ ನಡೆಯಲಿರುವ ಭಾರತ್ ಜೋಡೋ ಯಾತ್ರೆ ವೇಳೆ ಕಮಲ್ ನಾಥ್ ಅವರು ಖಾಲ್ಸಾ ಸ್ಟೇಡಿಯಂ ಪ್ರವೇಶಿಸಿದರೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಬಿಜೆಪಿ ಈಗಾಗಲೇ ಘೋಷಿಸಿದೆ.

SCROLL FOR NEXT