ದೇಶ

ಗುಜರಾತ್ ವಿಧಾನಸಭೆ ಚುನಾವಣೆ: ಏಳು ಬಂಡಾಯ ನಾಯಕರನ್ನು ಅಮಾನತುಗೊಳಿಸಿದ ಬಿಜೆಪಿ

Ramyashree GN

ಗಾಂಧಿನಗರ: ವಿಧಾನಸಭೆ ಚುನಾವಣೆ ನಡೆಯಲಿರುವ ಗುಜರಾತ್‌ನಲ್ಲಿ ರಾಜ್ಯ ಬಿಜೆಪಿ ಮುಖ್ಯಸ್ಥ ಸಿಆರ್ ಪಾಟೀಲ್ ಅವರು ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ನಿಂದ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಕ್ಕಾಗಿ ಏಳು ಬಂಡಾಯ ನಾಯಕರನ್ನು ಭಾನುವಾರ ಅಮಾನತುಗೊಳಿಸಿದ್ದಾರೆ.

ಹರ್ಸಾದ್ ವಾಸವ (ನಾಂದೋಡ್ ಕ್ಷೇತ್ರ- ನರ್ಮದಾ ಜಿಲ್ಲೆ), ಅರವಿಂದಭಾಯ್ ಲಡಾನಿ (ಕೇಶೋದ್-ಜುನಾಗಢ), ಛತ್ರಸಿನ್ಹ್ ಗುಂಜರ್ಸಾರಿಯಾ (ಧೃಂಗಧ್ರ - ಸುರೇಂದ್ರನಗರ), ಕೇತನ್ ಪಟೇಲ್ (ಪರ್ಡಿ - ವಲ್ಸಾದ್), ಭರತ್ ಚಾವ್ಡಾ (ರಾಜ್‌ಕೋಟ್ ಗ್ರಾಮಾಂತರ - ರಾಜ್‌ಕೋಟ್), ಉದಯ್ ಶಾ (ವೆರಾವಲ್ - ಗಿರ್ ಸೋಮನಾಥ್) ಮತ್ತು ಅಮ್ರೇಲಿ ಜಿಲ್ಲೆಯ ರಾಜುಲಾದಿಂದ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಕರಣ್ ಬರಯ್ಯ ಎಂಬುವವರನ್ನು ಅಮಾನತುಗೊಳಿಸಲಾಗಿದೆ ಎಂದು ಪಕ್ಷದ ಮಾಧ್ಯಮ ಸಂಯೋಜಕ ಯಜ್ಞೇಶ್ ದವೆ ತಿಳಿಸಿದ್ದಾರೆ.

ಕಾಂಗ್ರೆಸ್‌ಗೆ ಹೋಲಿಸಿದರೆ ಈ ಬಾರಿ ಬಿಜೆಪಿ ಹಲವು ಸ್ಥಾನಗಳಲ್ಲಿ ಬಂಡಾಯ ಎದುರಿಸುತ್ತಿದೆ ಎಂದು ರಾಜಕೀಯ ವಿಶ್ಲೇಷಕ ದಿಲೋಪ್ ಪಟೇಲ್ ಹೇಳಿದ್ದಾರೆ.

ಮಧು ಶ್ರೀವಾಸ್ತವ್ ಅವರು ವಘೋಡಿಯಾದಿಂದ (ವಡೋದರಾ), ದಿನೇಶ್ ಪಟೇಲ್ ಅವರು ಪದ್ರಾದಿಂದ, ಧವಲ್ಸಿನ್ಹ್ ಝಾಲಾ ಬಯಾದ್ ಮತ್ತು ಸಹಕಾರಿ ನಾಯಕ ಮಾವ್ಜಿ ದೇಸಾಯಿ ಧನೇರಾದಿಂದ ಸ್ಪರ್ಧಿಸಿದ್ದಾರೆ. ದೀಸಾ ಕ್ಷೇತ್ರದಿಂದ ರಾಜುಲ್‌ಬೆನ್ ದೇಸಾಯಿ, ಗಾಂಧಿನಗರ ದಕ್ಷಿಣದಿಂದ ಅಲ್ಪೇಶ್ ಠಾಕೂರ್, ಥರಾದ್‌ನಿಂದ ಶಂಕರ್ ಚೌಧರಿ, ಹಿಮತ್‌ನಗರದಿಂದ ವಿ.ಡಿ. ಝಲಾ ಅವರಂತಹ ಪಕ್ಷದ ಅಭ್ಯರ್ಥಿಗಳ ವಿರುದ್ಧ ಬಂಡಾಯ ನಾಯಕರು ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ.

ಬಂಡಾಯ ನಾಯಕರು ಬಿಜೆಪಿಯ ಅಭ್ಯರ್ಥಿಗಳನ್ನು ಪ್ಯಾರಾಚೂಟ್ ಅಭ್ಯರ್ಥಿಗಳೆಂದು ಕರೆಯುತ್ತಿದ್ದು, ಪಕ್ಷವು ಸ್ಥಳೀಯ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಬೇಕಿತ್ತು ಎಂದಿದ್ದಾರೆ.

ಈ ವಾರ ಇನ್ನೂ ಕೆಲವರನ್ನು ಅಮಾನತುಗೊಳಿಸುವ ಸಾಧ್ಯತೆ ಇದ್ದು, ಸ್ವತಂತ್ರವಾಗಿ ಸ್ಪರ್ದಿಸಿರುವ ಮತ್ತು ಬಿಜೆಪಿಗೆ ರಾಜೀನಾಮೆ ನೀಡದವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT