ದೇಶ

ಮಹಾತ್ಮ ಗಾಂಧಿ ಕೊಲ್ಲಲು ಗೋಡ್ಸೆಗೆ ಬಂದೂಕಿನ ನೆರವು ನೀಡಿದ್ದೇ ಸಾವರ್ಕರ್: ಮರಿ ಮೊಮ್ಮಗ ತುಷಾರ್ ಗಾಂಧಿ ಹೇಳಿಕೆ

Srinivasamurthy VN

ಮುಂಬೈ: ಸಾವರ್ಕರ್ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿರುವ ಬೆನ್ನಲ್ಲೇ ಅಂತಹುದೇ ಸ್ಫೋಟಕ ಹೇಳಿಕೆಯೊಂದು ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗ  ತುಷಾರ್ ಗಾಂಧಿ ಅವರಿಂದ ಬಂದಿದೆ.

ಸಾವರ್ಕರ್ ಅವರು ಬ್ರಿಟಿಷರಿಗೆ ಸಹಾಯ ಮಾಡಿದ್ದು ಮಾತ್ರವಲ್ಲದೇ ನಾಥೂರಾಂ ಗೋಡ್ಸೆ (Nathuram Godse) ಅವರಿಗೆ ಬಾಪು ಅವರನ್ನು ಕೊಲ್ಲಲು ಸಮರ್ಥ ಬಂದೂಕನ್ನು ಪಡೆಯಲು ಸಹಾಯ ಮಾಡಿದ್ದರು ಎಂದು ತುಷಾರ್ ಗಾಂಧಿ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಸಾವರ್ಕರ್ ಬ್ರಿಟಿಷರಿಗೆ ಸಹಾಯ ಮಾಡಿದ್ದಲ್ಲದೇ, ಬಾಪು ಅವರನ್ನು ಕೊಲ್ಲಲು ನಾಥೂರಾಂ ಗೋಡ್ಸೆಗೆ ಸಮರ್ಥ ಬಂದೂಕನ್ನು ಹುಡುಕಲು ಸಹಾಯ ಮಾಡಿದ್ದರು. ಬಾಪು ಹತ್ಯೆಗೂ 2 ದಿನಗಳ ಮೊದಲು ಗೋಡ್ಸೆ ಬಳಿ ಪ್ರಬಲವಾದ ಯಾವುದೇ ಶಸ್ತ್ರಗಳಿರಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. 

ಇದೇ ವಿಚಾರವಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿಗ ತುಷಾರ್ ಗಾಂಧಿ, 'ನಾನು ಯಾವುದೇ ಆರೋಪ ಮಾಡುತ್ತಿಲ್ಲ. ಇತಿಹಾಸದಲ್ಲಿ ದಾಖಲಾಗಿರುವುದನ್ನು ಹೇಳುತ್ತಿದ್ದೇನೆ. ಪೊಲೀಸ್ ಎಫ್‌ಐಆರ್ ಪ್ರಕಾರ ನಾಥೂರಾಂ ಗೋಡ್ಸೆ ಮತ್ತು ವಿನಾಯಕ ಆಪ್ಟೆ ಸಾವರ್ಕರ್ ಅವರು 1948 ರ ಜನವರಿ 26, 27 ರಂದು ಭೇಟಿಯಾಗಿದ್ದರು. ಅವರ ಭೇಟಿಯಾಗುವವರೆಗೂ ಗೋಡ್ಸೆ ಬಳಿ ಬಂದೂಕು ಇರಲಿಲ್ಲ. ಅವರು ಬಂದೂಕು ಹುಡುಕುತ್ತಾ ಮುಂಬೈನಾದ್ಯಂತ ಸುತ್ತಾಡಿದ್ದಾರೆ. ಆದರೆ ಈ ಭೇಟಿಯ ಬಳಿಕ ಅವರು ನೇರವಾಗಿ ದೆಹಲಿಗೆ ಹೋಗಿ, ಅಲ್ಲಿಂದ ಗ್ವಾಲಿಯರ್‌ಗೆ ಹೋದರು. ಅಲ್ಲಿ ಅವರಿಗೆ ಒಳ್ಳೆಯ ಪಿಸ್ತೂಲ್ ಸಿಕ್ಕಿದೆ. ಇದೆಲ್ಲವೂ ಬಾಪು ಹತ್ಯೆಯ 2 ದಿನಗಳ ಮೊದಲು ನಡೆದಿದೆ. ಇದು ಆರೋಪ ಅಲ್ಲ' ಎಂದು ಹೇಳಿದ್ದಾರೆ. 

ರಾಹುಲ್ ಗಾಂಧಿ ಬಳಿಕ ಇದೀಗ ತುಷಾರ್ ಅವರ ಹೇಳಿಕೆ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
 

SCROLL FOR NEXT