ದೇಶ

ರೋಜ್‌ಗಾರ್ ಮೇಳ: 71 ಸಾವಿರ ನೇಮಕಾತಿ ಪತ್ರಗಳನ್ನು ವಿತರಿಸಿದ ಪ್ರಧಾನಿ ಮೋದಿ

Sumana Upadhyaya

ನವದೆಹಲಿ: ಕೇಂದ್ರ ಸರ್ಕಾರದ 'ರೋಜ್ ಗಾರ್ ಮೇಳ'(ಉದ್ಯೋಗ ಮೇಳ)ದ ಭಾಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ ವಿಡಿಯೊ ಕಾನ್ಫರೆನ್ಸ್ ಮೂಲಕ 71 ಸಾವಿರಕ್ಕೂ ಅಧಿಕ ಮಂದಿ ಹೊಸ ಉದ್ಯೋಗಿಗಳಿಗೆ ನೇಮಕಾತಿ ಪತ್ರ ವಿತರಣೆ ಮಾಡಿದರು.

ಇದೇ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಹೊರತುಪಡಿಸಿ ದೇಶದ 45 ಕಡೆಗಳಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಾಗಿದೆ. ಕೇಂದ್ರ ಸರ್ಕಾರದ ಉದ್ಯೋಗ ಸೃಷ್ಟಿಯ ಆದ್ಯತೆಯ ಮೇರೆಗೆ ತನ್ನ ಬದ್ಧತೆಯನ್ನು ಈಡೇರಿಸಲು  ಈ ಅಭಿಯಾನವು ಮುಂಚೂಣಿಯದ್ದಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಉದ್ಯೋಗ ಮತ್ತು ಯುವಜನತೆಗೆ ಉತ್ತಮ ಅವಕಾಶ ಒದಗಿಸುವಲ್ಲಿ ದೇಶದ ಬೆಳವಣಿಗೆಯಲ್ಲಿ ನೇರವಾಗಿ ಭಾಗಿಯಾಗಲು, ಯುವಶಕ್ತಿಯನ್ನು ಸಶಕ್ತೀಕರಣಗೊಳಿಸಲು ಸಹಾಯವಾಗಲಿದೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.

ಕಳೆದ ಅಕ್ಟೋಬರ್ ನಲ್ಲಿ 75 ಸಾವಿರ ಮಂದಿಗೆ ಉದ್ಯೋಗ ಪತ್ರಗಳನ್ನು ನೀಡಲಾಗಿತ್ತು. ಮಿಷನ್ ಕಾರ್ಯವಿಧಾನದಲ್ಲಿ ಮುಂದಿನ ಒಂದೂವರೆ ವರ್ಷದಲ್ಲಿ 10 ಲಕ್ಷ ಮಂದಿಯನ್ನು ನೇಮಕಾತಿ ಮಾಡಿಕೊಳ್ಳುವಂತೆ ಪ್ರಧಾನ ಮಂತ್ರಿ ಮೋದಿ ಕಳೆದ ಜೂನ್ ನಲ್ಲಿ ಸರ್ಕಾರದ ಸಚಿವರು ಮತ್ತು ಇಲಾಖೆಗಳಿಗೆ ಸೂಚನೆ ನೀಡಿದ್ದರು.

ಇಂದು ಪ್ರಧಾನ ಮಂತ್ರಿಗಳು ಕರ್ಮಯೋಗಿ ಪ್ರಾರಂಭ ವಿಧಾನವನ್ನು ಕೂಡ ಉದ್ಘಾಟಿಸಿದರು. ಇದು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಎಲ್ಲಾ ಹೊಸ ನೇಮಕಾತಿಗಳಿಗಾಗಿ ಆನ್‌ಲೈನ್ ಓರಿಯಂಟೇಶನ್ ಕೋರ್ಸ್ ಆಗಿದೆ.ಇದು ಸರ್ಕಾರಿ ನೌಕರರಿಗೆ ನೀತಿ ಸಂಹಿತೆ, ಕಾರ್ಯಸ್ಥಳದ ನೈತಿಕತೆ ಮತ್ತು ಸಮಗ್ರತೆ, ಮಾನವ ಸಂಪನ್ಮೂಲ ನೀತಿಗಳು ಮತ್ತು ಇತರ ಪ್ರಯೋಜನಗಳು ಮತ್ತು ಭತ್ಯೆಗಳನ್ನು ಒಳಗೊಂಡಿರುತ್ತದೆ, ನೀತಿಗಳಿಗೆ ಒಗ್ಗಿಕೊಳ್ಳಲು ಮತ್ತು ಹೊಸ ಪಾತ್ರಗಳಿಗೆ ಸರಾಗವಾಗಿ ಪರಿವರ್ತನೆಗೊಳ್ಳಲು ಸಹಾಯ ಮಾಡುತ್ತದೆ.

SCROLL FOR NEXT