ದೇಶ

ಅರವಿಂದ್ ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಸಂಚು, ಎಫ್ಐಆರ್ ದಾಖಲಿಸಿ ಚುನಾವಣಾ ಆಯೋಗಕ್ಕೂ ದೂರು ನೀಡುತ್ತೇವೆ: ಮನೀಶ್ ಸಿಸೋಡಿಯಾ

Sumana Upadhyaya

ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹತ್ಯೆಗೆ ಭಾರತೀಯ ಜನತಾ ಪಕ್ಷ ಸಂಚು ನಡೆಸುತ್ತಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಚು ರೂಪಿಸುವಲ್ಲಿ ದೆಹಲಿ ಬಿಜೆಪಿ ನಾಯಕ ಮನೋಜ್ ತಿವಾರಿ ಭಾಗಿಯಾಗಿದ್ದಾರೆ ಎಂದಿದ್ದಾರೆ. 

ಗುಜರಾತ್ ಮತ್ತು ದೆಹಲಿ ನಗರಪಾಲಿಕೆ (MCD) ಚುನಾವಣಾ ಸೋಲಿನ ಭೀತಿಯಿಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಸಂಚು ರೂಪಿಸುತ್ತಿದೆ ಎಂದು ಆರೋಪಿಸಿದ ಬೆನ್ನಲ್ಲೇ, ಈ ಬಗ್ಗೆ ತನಿಖೆಗೆ ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ. 

ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಸೋಡಿಯಾ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ನಾಯಕ ಮನೋಜ್ ತಿವಾರಿ ಅವರು ನಿನ್ನೆ ಬಳಸಿರುವ ರೀತಿಯ ಭಾಷೆ ಮುಕ್ತ ಬೆದರಿಕೆಯಾಗಿದೆ ಎಂದು ಆರೋಪಿಸಿದರು. 

ಅರವಿಂದ್ ಕೇಜ್ರಿವಾಲ್ ಹತ್ಯೆಗೆ ಸಂಚು ರೂಪಿಸಿರುವುದನ್ನು ಅವರ ಭಾಷೆಯೇ ಸೂಚಿಸುತ್ತದೆ. ಬೆದರಿಕೆ ಹಾಕಿದ ಮನೋಜ್ ತಿವಾರಿ ಅವರನ್ನು ಬಂಧಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಸಿಸೋಡಿಯಾ ಹೇಳಿದರು.

ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಮನೋಜ್ ತಿವಾರಿ, "ಅರವಿಂದ್ ಕೇಜ್ರಿವಾಲ್ ಅವರ ಸುರಕ್ಷತೆಯ ಬಗ್ಗೆ ನನಗೆ ಕಾಳಜಿ ಇದೆ. ಸಿಸೋಡಿಯಾ ಅವರು ಕೇಜ್ರಿವಾಲ್ ಅವರನ್ನು ಕೊಲ್ಲಲು ಬಿಜೆಪಿ ಪಿತೂರಿ ನಡೆಸುತ್ತಿರುವ ಹಳೆಯ ಸ್ಕ್ರಿಪ್ಟ್ ನ್ನು ಓದುತ್ತಿದ್ದಾರೆ. ಕೇಜ್ರಿವಾಲ್ ಅವರ ಹತ್ಯೆಯ ಬಗ್ಗೆ ಸಿಸೋಡಿಯಾ ಭವಿಷ್ಯ ನುಡಿದಿರುವಾಗ ಸಿಸೋಡಿಯಾ ಅವರನ್ನು ಬಂಧಿಸಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಏನಾಗುತ್ತಿದೆ ಎಂದು ನನಗೆ ಗೊತ್ತಾಗುತ್ತಿಲ್ಲ ಎಂದರು.

ಗುಜರಾತ್ ಮತ್ತು ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋಲಿನ ಭಯದಿಂದ ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಸಂಚು ರೂಪಿಸುತ್ತಿದೆ ಎಂದು ಸಿಸೋಡಿಯಾ ಆರೋಪಿಸಿದ್ದು, ದೆಹಲಿ ಸಂಸದ ಮನೋಜ್ ತಿವಾರಿ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು.

ಮೂಲಗಳ ಪ್ರಕಾರ, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ನಗರ ಪೊಲೀಸ್ ಕಮಿಷನರ್ ಅವರಿಗೆ ಆರೋಪಗಳನ್ನು ಪರಿಗಣಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

SCROLL FOR NEXT