ದೇಶ

ಜ್ಯೋತಿಷಿ ಬಳಿ ಹೋಗಿ ಅಂಗೈ ತೋರಿಸಿ ಸರ್ಕಾರದ ಭವಿಷ್ಯ ಕೇಳಿದ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ: ವಿರೋಧ ಪಕ್ಷಗಳ ಟೀಕೆ

Sumana Upadhyaya

ಮುಂಬೈ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ, ಅದಕ್ಕೆ ಸಂಬಂಧಪಟ್ಟಂತೆ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಹೇಳಿಕೆ ನೀಡುತ್ತಿರುವುದರ ಮಧ್ಯೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ನಾಸಿಕ್ ಜಿಲ್ಲೆಯ ಸಿನ್ನಾರ್‌ನಲ್ಲಿ ಸ್ಥಳೀಯ ಜ್ಯೋತಿಷಿಯೊಬ್ಬರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಮತ್ತು ವಿವಾದಕ್ಕೆ ಕಾರಣವಾಗಿದೆ. 

ಕೆಲ ಸಮಯಗಳ ಹಿಂದೆ ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದಿಂದ ಶಿವಸೇನೆಯ ಏಕನಾಥ್ ಶಿಂಧೆ ಬಣ ಬಂಡಾಯವೆದ್ದು ಮೈತ್ರಿ ಸರ್ಕಾರ ಮುರಿದು ಬಿದ್ದು ನಂತರ ಶಿಂಧೆ ಮುಖ್ಯಮಂತ್ರಿಯಾದರು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ದೇವೇಂದ್ರ ಫಡ್ನವೀಸ್ ಉಪ ಮುಖ್ಯಮಂತ್ರಿಯಾದರು.

ಆದರೆ ಇದೀಗ ಏಕನಾಥ್ ಶಿಂಧೆ ಜ್ಯೋತಿಷಿಯೊಬ್ಬರನ್ನು ಭೇಟಿ ಮಾಡಿರುವುದು ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲವೇನೋ ಎಂಬ ಸಂಶಯ ಮೂಡುತ್ತಿದೆ. ಮಹಾರಾಷ್ಟ್ರದಲ್ಲಿ ಮೂಢನಂಬಿಕೆ ಮತ್ತು ಮಾಟಮಂತ್ರ ವಿರೋಧಿ ಕಾಯ್ದೆ ಜಾರಿಯಲ್ಲಿದೆ. ಆದರೆ ಅದಕ್ಕೆ ವಿರುದ್ಧವಾಗಿ  ಸಿಎಂ ಏಕನಾಥ್ ಶಿಂಧೆ  ನಡೆದುಕೊಂಡಿದ್ದಾರೆ ಎಂದು ಮೂಢನಂಬಿಕೆ ವಿರೋಧಿ ಸಂಘಟನೆಗಳು ಆರೋಪಿಸಿವೆ. ಶಿಂಧೆ ಮೊನ್ನೆ ಬುಧವಾರ ತಮ್ಮ ಅಧಿಕೃತ ಸಭೆಗಳನ್ನು ರದ್ದುಗೊಳಿಸಿ ಸಾಯಿಬಾಬಾರವರ ಆಶೀರ್ವಾದ ಪಡೆಯಲು ಶಿರಡಿಗೆ ಧಾವಿಸಿದ್ದರು. ತಮ್ಮ ಅಧಿಕೃತ ಮಾರ್ಗವನ್ನು ಕೂಡ ಬದಲಿಸಿ ಬೇರೆ ಮಾರ್ಗದ ಮೂಲಕ ಬಂದಿದ್ದರು. ಅವರ ಸರ್ಕಾರದ ಭವಿಷ್ಯವನ್ನು ತಿಳಿಯಲು ಸ್ಥಳೀಯ ಜ್ಯೋತಿಷಿ/ಹಸ್ತಸಾಮುದ್ರಿಕರನ್ನು ಭೇಟಿ ಮಾಡಲು ನಾಸಿಕ್ ಜಿಲ್ಲೆಯ ಸಿನ್ನಾರ್‌ಗೆ ಹೋಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. 

ದೇವಾಲಯದ ಟ್ರಸ್ಟ್‌ನ ಸದಸ್ಯರೊಬ್ಬರು ಪ್ರಸಿದ್ಧ ಜ್ಯೋತಿಷಿಯಾಗಿರುವ ಸಿನ್ನಾರ್‌ನಲ್ಲಿರುವ ಈಶಾನೇಶ್ವರ ದೇವಸ್ಥಾನಕ್ಕೆ ಶಿಂಧೆ ಭೇಟಿ ನೀಡಿದ್ದಾರೆ. ಶಿಂಧೆ ಮತ್ತು ಅವರ ಪತ್ನಿ ದೇವಸ್ಥಾನದೊಳಗೆ 'ಪೂಜೆ' ನೆರವೇರಿಸಿದರು. ಅಲ್ಲಿ ಸಿಎಂ ಜ್ಯೋತಿಷಿಗೆ ತಮ್ಮ ಅಂಗೈ ತೋರಿಸಿದರು ಎಂದು ಹೇಳಲಾಗುತ್ತಿದೆ.

ದೇವಾಲಯದ ಟ್ರಸ್ಟ್ ಬಾಬಾ ನಾಸಿಕ್‌ನಲ್ಲಿದ್ದಾರೆ. ಅಲ್ಲಿ ಕಚೇರಿಯನ್ನು ಸಹ ಹೊಂದಿದೆ, ಶಿಂಧೆ ಅವರು ತಮ್ಮ ಅಂಗೈ ತೋರಿಸಲು, ಅವರ ಸಲಹೆ ಪಡೆಯಲು ನಿಯಮಿತವಾಗಿ ಭೇಟಿ ನೀಡುತ್ತಾರೆ ಎಂದು ಮೂಲಗಳು ಹೇಳುತ್ತವೆ. 

ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ನಾನೇನು ಕದ್ದುಮುಚ್ಚಿ ಹೋಗಿಲ್ಲ, ಹಗಲು ಹೊತ್ತಿನಲ್ಲಿ ಹೋಗಿದ್ದೆ. ದೇವಸ್ಥಾನಗಳಿಗೆ ಹೋಗುವುದನ್ನು ಭಾರತದಲ್ಲಿ ನಿಷೇಧಿಸಲಾಗಿಲ್ಲ. ನಾವು ಯಾವುದೇ ದೇವಸ್ಥಾನಕ್ಕೆ ಹೋಗಬಹುದು, ಯಾರನ್ನು ಬೇಕಾದರೂ ಭೇಟಿ ಮಾಡಬಹುದು. ರಂದು ಉದ್ಧವ್ ಠಾಕ್ರೆ ಸರ್ಕಾರವನ್ನು ಉರುಳಿಸಿದ ಬಳಿಕ ಜೂನ್ 30ರಂದು ಇಲ್ಲಿಗೆ ಬಂದು ಕೈ ತೋರಿಸಿದ್ದೆ. ನಾನು ಯಾರಿಂದಲೂ ಏನನ್ನೂ ಮುಚ್ಚಿಡುವುದಿಲ್ಲ. ಮಾಧ್ಯಮದವರ ಸಮ್ಮುಖದಲ್ಲಿ ಇಬ್ಬರು ಸಚಿವರೊಂದಿಗೆ ದೇವಸ್ಥಾನಕ್ಕೆ ಹೋಗಿದ್ದೆ ಎಂದು ಹೇಳುತ್ತಾರೆ. 

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ತಮ್ಮ ಭವಿಷ್ಯವನ್ನು ಪರೀಕ್ಷಿಸಲು ಯಾವುದೇ ರಾಜ್ಯದ ಸಿಎಂ ಒಬ್ಬ ಬಾಬಾರ ಬಳಿ ಇದುವರೆಗೆ ಹೋಗಿರಲಿಲ್ಲ. ಮಹಾರಾಷ್ಟ್ರವು ತನ್ನ ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುವ ಪ್ರಗತಿಪರ ರಾಜ್ಯವಾಗಿದೆ. ಪ್ರಸ್ತುತ ಸಿಎಂ ಜ್ಯೋತಿಷಿಯನ್ನು ಭೇಟಿ ಮಾಡಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಮೂಢನಂಬಿಕೆ ವಿರೋಧಿ ಕಾನೂನು ಇರುವಾಗ ಸಿಎಂ ಮೂಢನಂಬಿಕೆಯನ್ನು ಉತ್ತೇಜಿಸಬಾರದು ಎಂದು ವಿರೋಧ ಪಕ್ಷದ ನಾಯಕ ಹಾಗೂ ಎನ್‌ಸಿಪಿಯ ಹಿರಿಯ ನಾಯಕ ಅಜಿತ್ ಪವಾರ್ ಕೂಡ ಹೇಳಿದ್ದಾರೆ.

SCROLL FOR NEXT