ದೇಶ

ಎಸ್ ಟಿ ಮೀಸಲಾತಿ ಶೇ. 6 ರಿಂದ 10ಕ್ಕೆ ಹೆಚ್ಚಿಸಿದ ತೆಲಂಗಾಣ ಸರ್ಕಾರ

Lingaraj Badiger

ಹೈದರಾಬಾದ್: ಪರಿಶಿಷ್ಟ ಪಂಗಡ(ಎಸ್ ಟಿ)ದ ಸಮುದಾಯಗಳ ಮೀಸಲಾತಿಯನ್ನು ಶೇಕಡಾ 6 ರಿಂದ 10ಕ್ಕೆ ಹೆಚ್ಚಿಸಿ ತೆಲಂಗಾಣ ಸರ್ಕಾರ ಶುಕ್ರವಾರ ತಡ ರಾತ್ರಿ ಆದೇಶ ಹೊರಡಿಸಿದೆ.

ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ರಾಜ್ಯ ಸರ್ಕಾರದ ಅಡಿಯಲ್ಲಿನ ಸೇವೆಗಳಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ವರ್ಧಿತ ಮೀಸಲಾತಿ ಅನ್ವಯವಾಗಲಿದೆ ಎಂದು ಬುಡಕಟ್ಟು ಕಲ್ಯಾಣ ಇಲಾಖೆಯ ಆದೇಶ ತಿಳಿಸಿದೆ.

ತೆಲಂಗಾಣ ವಿಧಾನಸಭೆಯು ಏಪ್ರಿಲ್ 2017ರಲ್ಲಿ ಎಸ್ ಟಿ ಸಮುದಾಯದ ಮೀಸಲಾತಿಯನ್ನು ಶೇಕಡಾ 10 ಕ್ಕೆ ಹೆಚ್ಚಿಸುವ ಮಸೂದೆ ಅಂಗೀಕರಿಸಿತ್ತು. ಅದೇ ವರ್ಷ ಮಸೂದೆಯನ್ನು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಭಾರತ ಸರ್ಕಾರಕ್ಕೆ ಕಳುಹಿಸಲಾಗಿದ್ದರೂ, ಆರು ವರ್ಷಗಳ ನಂತರ, ರಾಜ್ಯ ಸರ್ಕಾರದಿಂದ ಹಲವಾರು ಪ್ರಾತಿನಿಧ್ಯಗಳ ಹೊರತಾಗಿಯೂ ಅದು ಇನ್ನೂ ಬಾಕಿ ಉಳಿದಿದೆ. ಹೀಗಾಗಿ ಮೀಸಲಾತಿ ಹೆಚ್ಚಳವನ್ನು ತಕ್ಷಣವೇ ಜಾರಿಗೆ ತರುವಂತೆ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ವಿವಿಧ ವರ್ಗಗಳಿಗೆ ಮೀಸಲಾತಿ ಶೇ.54ಕ್ಕೆ ಏರಿದೆ. ತೆಲಂಗಾಣ ರಾಷ್ಟ್ರೀಯ ಏಕೀಕರಣ ದಿನದಂದು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಎಸ್ ಟಿ ಮೀಸಲಾತಿಯನ್ನು ಶೇಕಡಾ 10ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದರು.

SCROLL FOR NEXT