ದೇಶ

ಆಂಧ್ರ ಪ್ರದೇಶ: ಸೂರ್ಯಲಂಕ ಬೀಚ್‌ನಲ್ಲಿ ದುರಂತ, ಈಜಲು ಹೋಗಿ 3 ಮಕ್ಕಳ ಸಾವು, ಮೂವರು ಕಣ್ಮರೆ

Srinivasamurthy VN

ಅಮರಾವತಿ: ಆಯುಧಪೂಜೆ ಹಬ್ಬದ ದಿನವೇ ಆಂಧ್ರ ಪ್ರದೇಶದಲ್ಲಿ ದುರಂತವೊಂದು ಸಂಭವಿಸಿದ್ದು, ಬೀಚ್‌ನಲ್ಲಿ ಈಜಲು ಹೋಗಿದ್ದ 6 ಮಂದಿ ಕಣ್ಮರೆಯಾಗಿದ್ದು, ಈ ಪೈಕಿ ಮೂರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಆಂಧ್ರ ಪ್ರದೇಶದ ಬಾಪಟ್ಲ ಜಿಲ್ಲೆಯ ಸೂರ್ಯಲಂಕ ಬೀಚ್‌ನಲ್ಲಿ ಈಜಲು ಹೋಗಿದ್ದ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಇನ್ನೂ ಮೂವರು ಕಣ್ಮರೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುರಂತ ಸಂಭವಿಸಿದ ವೇಳೆ 8 ಮಂದಿ ಈಜಿಗೆ ತೆರಳಿದ್ದರು. ಈ ಪೈಕಿ 6 ಮಂದಿ ಮುಳುಗಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂರು ಮಕ್ಕಳು ಸಾವನ್ನಪ್ಪಿದ್ದು ಮೂರು ಮಂದಿ ನಾಪತ್ತೆಯಾಗಿದ್ದಾರೆ ಎಂದು ಬಾಪಟ್ಲ ಜಿಲ್ಲೆಯ ಎಸ್‌ಪಿ ವಕುಲ್‌ ಜಿಂದಾಲ್‌ ಅವರು ತಿಳಿಸಿದ್ದಾರೆ.

ದಸರಾ ರಜೆ ಕಳೆಯಲು ವಿದ್ಯಾರ್ಥಿಗಳ ಗುಂಪು ವಿಜಯವಾಡದಿಂದ ಸೂರ್ಯಲಂಕ ಬೀಚ್ ಗೆ ಬಂದಿದ್ದರು. ತೀರದಲ್ಲಿ ಆಟವಾಡುತ್ತಿದ್ದ ಸಂದರ್ಭ ಸಮುದ್ರದ ಆಳದತ್ತ ಸರಿದಿದ್ದಾರೆ. ಈ ವೇಳೆ ದುರಂತ ಸಂಭವಿಸಿದೆ. ಸಮುದ್ರದ ಮಧ್ಯೆ ಬಹಳ ದೂರದಿಂದ ಮೂವರು ಮಕ್ಕಳ ಮೃತದೇಹವನ್ನು ಹೊರ ತೆಗೆಯಲಾಗಿದೆ. ಕಾಣೆಯಾಗಿರುವ ಇನ್ನೂ ಮೂವರಿಗಾಗಿ ಶೋಧಕಾರ್ಯ ನಡೆದಿದೆ ಎಂದು ಎಸ್‌ಪಿ ಹೇಳಿದ್ದಾರೆ. 

ಮೃತರಲ್ಲಿ ಇಬ್ಬರು ಕ್ರಮವಾಗಿ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಾಗಿದ್ದು, ಇನ್ನುಳಿದವರು 10ನೇ ತರಗತಿಯಲ್ಲಿ ಅನುತ್ತೀರ್ಣಗೊಂಡು ಕಲಿಕೆಯನ್ನು ಮೊಟಕುಗೊಳಿಸಿದ್ದರು ಎಂದು ಸ್ಥಳೀಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಗುಂಪಿನಲ್ಲಿದ್ದವರ ಪೈಕಿ ಕೆಲವರು ಕ್ಯಾಟರಿಂಗ್‌ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಸೂರ್ಯಲಂಕದಲ್ಲಿ ಮದುವೆ ಕಾರ್ಯಕ್ರಮಕ್ಕೆ ಹೋಗುತ್ತಿರುವುದಾಗಿ ಕುಟುಂಬಸ್ಥರಿಗೆ ತಿಳಿಸಿ ಬಂದಿದ್ದರು. ವಿಜಯವಾಡದಿಂದ ಸೂರ್ಯಲಂಕಕ್ಕೆ ರೈಲಿನ ಮೂಲಕ ಮಂಗಳವಾರ ಬೆಳಗ್ಗೆ ಬಂದಿದ್ದರು ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.
 

SCROLL FOR NEXT