ದೇಶ

ಮಕ್ಕಳ ಅನಾಥಾಶ್ರಮದಲ್ಲಿ ವಿಷಾಹಾರ ಸೇವಿಸಿ ಮೂರು ಸಾವು: 11 ಮಂದಿ ಆಸ್ಪತ್ರೆಗೆ ದಾಖಲು

Vishwanath S

ಕೊಯಮತ್ತೂರು: ತಿರುಪುರದ ಶಿಶುಪಾಲನಾ ಕೇಂದ್ರದಲ್ಲಿ ಇಂದು ವಿಷಾಹಾರ ಸೇವನೆಯಿಂದ ಮೂವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು ಇನ್ನು ಅಸ್ವಸ್ಥಗೊಂಡಿರುವ 11 ಬಾಲಕರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಬಾಲಕರು ಬುಧವಾರ ರಾತ್ರಿ ಊಟಕ್ಕೆ 'ರಸ' ಮತ್ತು ಲಡ್ಡು ಮಿಶ್ರಿತ ಅನ್ನವನ್ನು ಸೇವಿಸಿದರು. ನಂತರ ಅವರಲ್ಲಿ ಕೆಲವರಿಗೆ ವಾಂತಿ ಮತ್ತು ಭೇದಿಯಾಗಿತ್ತು. ಇಂದು ಬೆಳಗ್ಗೆ ಸಹ ಅವರು ಉಪಹಾರ ಸೇವಿಸಿದರು. ನಂತರ ಅವರ ಸ್ಥಿತಿ ಹದಗೆಟ್ಟಿದ್ದು ಕೆಲವರು ಪ್ರಜ್ಞಾಹೀನರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವರೆಲ್ಲರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ತಿರುಪುರ ಮತ್ತು ಅವಿನಾಶಿಯ ಸರ್ಕಾರಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು.

ಆದರೆ, 8ರಿಂದ 13 ವರ್ಷದೊಳಗಿನ ಮೂವರು ಬಾಲಕರು ಆಸ್ಪತ್ರೆಯಲ್ಲಿ ಮೃತಪಟ್ಟರೆ, ಇತರರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರನ್ನು ತೀವ್ರ ನಿಗಾ ಘಟಕಕ್ಕೆ(ಐಸಿಯು) ದಾಖಲಿಸಲಾಗಿದೆ.

ಆಸ್ಪತ್ರೆಗೆ ಭೇಟಿ ನೀಡಿದ್ದ ತಿರುಪುರ ಜಿಲ್ಲಾಧಿಕಾರಿ ಎಸ್ ವಿನೀತ್ ಅವರು, ವಿಷಾಹಾರದ ಪ್ರಾಥಮಿಕ ವರದಿಗಳ ನಂತರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.

ವಿಚಾರಣೆಯ ನಂತರ ತಪ್ಪಿತಸ್ಥರೆಂದು ಕಂಡುಬಂದರೆ ಶ್ರೀ ವಿವೇಕಾನಂದ ನಿರ್ಗತಿಕರ ಕೇಂದ್ರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿನೀತ್ ಹೇಳಿದರು. ಪೊಲೀಸರು ತನಿಖೆ ನಡೆಸುತ್ತಿದ್ದು, ನಿರಾಶ್ರಿತ ಕೇಂದ್ರ ನಡೆಸುತ್ತಿರುವವರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

SCROLL FOR NEXT