ದೇಶ

ಪಶ್ಚಿಮ ಬಂಗಾಳ: ಪೂಜೆಗೆ ದೇಣಿಗೆ ನೀಡದ್ದಕ್ಕೆ ದುರ್ಗಾ ಪೂಜೆ ಮಂಟಪದಲ್ಲೇ ಮಹಿಳೆಗೆ ಥಳಿಸಿ ಬರ್ಬರ ಹತ್ಯೆ!

Vishwanath S

ಕೋಲ್ಕತ್ತಾ: ಪೂಜೆಗೆ ಹಣ ನೀಡದೆ ದುರ್ಗಾ ಪೂಜೆಯ ಮಂಟಪಕ್ಕೆ ಬಂದಿದ್ದ 45 ವರ್ಷದ ಗೃಹಿಣಿಯೊಬ್ಬರನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಮುರ್ಷಿದಾಬಾದ್‌ನಲ್ಲಿ ಮಂಗಳವಾರ ನಡೆದಿದೆ. 

ಆಕೆಯ ಕುಟುಂಬವು ಪೂಜೆಗೆ ದೇಣಿಗೆ ನೀಡಲು ನಿರಾಕರಿಸಿತ್ತು. ಹೀಗಾಗಿ ಮಹಿಳೆಗೆ ಭೀಕರವಾಗಿ ಥಳಿಸಿದ್ದು ಬಿದಿರಿನ ಕೋಲಿನಿಂದ ಹೊಡೆದು ಹತ್ಯೆ ಮಾಡಿದ್ದಾರೆ. ಕೊಲೆ ಆರೋಪ ಸಂಬಂಧ ಇಬ್ಬರು ಮಹಿಳೆಯರು ಸೇರಿದಂತೆ ಐವರನ್ನು ಬಂಧಿಸಲಾಗಿದೆ.

ಪೊಲೀಸರ ಪ್ರಕಾರ, ಮುರ್ಷಿದಾಬಾದ್ ಜಿಲ್ಲೆಯ ಸನ್ನಿದಂಗ ಗ್ರಾಮದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 'ಮೃತ ಸುಚಿತ್ರಾ ಮಂಡಲ್ ಇತರರಂತೆ ಪೂಜೆ ಮಂಟಪಕ್ಕೆ ಪ್ರಾರ್ಥನೆ ಸಲ್ಲಿಸಲು ಬಂದಿದ್ದರು. ಮಂಟಪದಲ್ಲಿ ಆಕೆಯ ಇರುವಿಕೆಯನ್ನು ಕಂಡ ಮಹಿಳೆಯರು ಮತ್ತು ಸಂಘಟಕರು ದುರ್ಗಾ ಮಾತೆಯ ವಿಗ್ರಹದ ಕಡೆಗೆ ಹೋಗದಂತೆ ತಡೆದಿದ್ದಾರೆ ಎಂದು ಮುರ್ಷಿದಾಬಾದ್ ಜಿಲ್ಲಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇತರ ಗ್ರಾಮಸ್ಥರು ಪೂಜೆಗೆ ದೇಣಿಗೆ ನೀಡಿದ್ದರು. ಆದರೆ ಆಕೆಯ ಕುಟುಂಬವು ಪಾವತಿಸಲು ನಿರಾಕರಿಸಿದ್ದರಿಂದ ಆಕೆಯನ್ನು ಮಂಟಪ ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ಸಂಘಟಕರು ತಿಳಿಸಿದ್ದರು.

ಸುಚಿತ್ರಾ ಪೂಜೆ ಮಂಟಪ ಬಿಟ್ಟು ಹೊರಡಲು ಸಿದ್ಧರಿರಲಿಲ್ಲ. ಅಲ್ಲದೆ ಅಲ್ಲೆ ಪ್ರಾರ್ಥಿಸಲು ನಿರ್ಧರಿಸಿದರು. ವೇಳೆ ಮಹಿಳೆಯರು ಆಕೆಯನ್ನು ಜರಿಯುತ್ತಾ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡ ಸುಚಿತ್ರಾ ನೆಲಕ್ಕೆ ಬಿದ್ದಿದ್ದಾಳೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮೃತಳ ಸಹೋದರಿ ಪುತ್ರಿ ಮೃಣ್ಮೊಯ್ ಮಂಡಲ್ ಗೆ ಆಯೋಜಕರು ಬೆದರಿಕೆ ಹಾಕಿದ್ದಾರೆ. ನಿಮ್ಮ ಚಿಕ್ಕಮ್ಮ ವಿಗ್ರಹದ ಮುಂದೆ ಹೋದರೆ ಘೋರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

ಆದರೂ ಮಹಿಳೆ ಪೂಜೆಗೆ ಮುಂದಾದಾಗ ಮಹಿಳೆಯರು ಮತ್ತು ಪೂಜಾ ಸಂಘಟಕರ ತಂಡ ಅವಳನ್ನು ಥಳಿಸಲು ಪ್ರಾರಂಭಿಸಿತು. ನನ್ನ ಚಿಕ್ಕಮ್ಮ ನೆಲದ ಮೇಲೆ ಬಿದ್ದಾಗಲೂ ಅವಳನ್ನು ಬಿಡಲಿಲ್ಲ. ಬಿದಿರಿನ ಕೋಲಿನಿಂದ ಹೊಡೆದರು. ಈ ವೇಳೆ ಇತರ ಗ್ರಾಮಸ್ಥರು ಮಧ್ಯಪ್ರವೇಶಿಸಿ ಚಿಕ್ಕಮ್ಮನ ರಕ್ಷಣೆಗೆ ಮುಂದಾದರು ಎಂದಿದ್ದಾರೆ.

ಸುಚಿತ್ರಾಳನ್ನು ನೆರೆಹೊರೆಯವರು ರಕ್ಷಿಸಿ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕೆಯ ತಲೆ ಮತ್ತು ಎದೆಯ ಮೇಲೆ ಗಾಯವಾಗಿದ್ದು ಇದು ಮಾರಣಾಂತಿಕವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
ಇನ್ನು ಸುಚಿತ್ರಾ ಅವರ ನೆರೆಹೊರೆಯವರಲ್ಲಿ ಒಬ್ಬರಾದ ಬಿಸಾಖಾ ಸರ್ಕಾರ್ ಅವರು ಘಟನೆಯನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಹೇಳಿದರು. 'ನಾವು ಎಲ್ಲಾ ಅಪರಾಧಿಗಳನ್ನು ಕಂಬಿಗಳ ಹಿಂದೆ ನೋಡಲು ಬಯಸುತ್ತೇವೆ. ಉಗ್ರ ಶಿಕ್ಷೆ ಸಿಗಬೇಕು ಎಂದು ಅವರು ಹೇಳಿದರು.

SCROLL FOR NEXT