ದೇಶ

ಗುಜರಾತ್: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದ್ದ ಎಮ್ಮೆಗಳ ಮಾಲೀಕರ ವಿರುದ್ಧ ಎಫ್‌ಐಆರ್

Ramyashree GN

ಅಹಮದಾಬಾದ್: ಮುಂಬೈ-ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದು ರೈಲಿನ ಮುಂಭಾಗಕ್ಕೆ ಹಾನಿ ಮಾಡಿದ ಎಮ್ಮೆಗಳ ಮಾಲೀಕರ ವಿರುದ್ಧ ಗುಜರಾತ್‌ನ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಎಮ್ಮೆಗಳಿಗೆ ಡಿಕ್ಕಿ ಹೊಡೆದ ನಂತರ ಹಾನಿಗೊಳಗಾದ ಸೆಮಿ-ಹೈ ಸ್ಪೀಡ್ ರೈಲಿನ ಡ್ರೈವರ್ ಕೋಚ್‌ನ ನೋಸ್ ಕೋನ್ ಕವರ್ ಅನ್ನು ಮುಂಬೈನಲ್ಲಿ ಬದಲಾಯಿಸಲಾಗಿದೆ ಎಂದು ಪಶ್ಚಿಮ ರೈಲ್ವೆ (ಡಬ್ಲ್ಯುಆರ್) ಹೇಳಿಕೆಯಲ್ಲಿ ತಿಳಿಸಿದೆ.

ಗುರುವಾರ ಬೆಳಗ್ಗೆ 3 ಗಂಟೆ ಸುಮಾರಿಗೆ ರೈಲು ಗಾಂಧಿನಗರಕ್ಕೆ ತೆರಳುತ್ತಿದ್ದಾಗ ಅಹಮದಾಬಾದ್ ಬಳಿ ಮುಂಬೈ ಸೆಂಟ್ರಲ್-ಗಾಂಧಿನಗರ ವಂದೇ ಭಾರತ್ ರೈಲು ಸುಮಾರು 11 ಇದ್ದ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ನಾಲ್ಕು ಎಮ್ಮೆಗಳು ಮೃತಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಹಮದಾಬಾದ್‌ನ ವತ್ವಾ ಮತ್ತು ಮಣಿನಗರ ರೈಲು ನಿಲ್ದಾಣಗಳ ನಡುವೆ ವಂದೇ ಭಾರತ್ ರೈಲಿನ ಮಾರ್ಗದಲ್ಲಿ ಬಂದ ಎಮ್ಮೆಗಳ ಅಪರಿಚಿತ ಮಾಲೀಕರ ವಿರುದ್ಧ ಆರ್‌ಪಿಎಫ್ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದೆ ಎಂದು ಅಹಮದಾಬಾದ್ ವಿಭಾಗದ ಡಬ್ಲ್ಯುಆರ್‌ನ ಹಿರಿಯ ವಕ್ತಾರ ಜಿತೇಂದ್ರ ಕುಮಾರ್ ಜಯಂತ್ ಹೇಳಿದ್ದಾರೆ.

ಇದುವರೆಗೆ ಎಮ್ಮೆಗಳ ಮಾಲೀಕರನ್ನು ಗುರುತಿಸಲು ರೈಲ್ವೆ ಪೊಲೀಸರಿಗೆ ಸಾಧ್ಯವಾಗಿಲ್ಲ ಮತ್ತು ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಜಾನುವಾರುಗಳ ಡಿಕ್ಕಿಯಲ್ಲಿ ರೈಲಿನ ಡ್ರೈವರ್ ಕೋಚ್‌ನ ನೋಸ್ ಕೋನ್ ಕವರ್ ಮತ್ತು ಅದರ ಮೌಂಟಿಂಗ್ ಬ್ರಾಕೆಟ್‌ಗಳು ಹಾನಿಗೊಳಗಾಗಿವೆ. ಆದಾಗ್ಯೂ, ರೈಲಿನ ಪ್ರಮುಖ ಭಾಗಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.

ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ರೈಲು ಇಂದು ಮುಂಬೈನಿಂದ ಹೊರಟಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಪಶ್ಚಿಮ ರೈಲ್ವೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.

ವಂದೇ ಭಾರತ್ ಸರಣಿಯ ಮೂರನೇ ಸೇವೆಯಾದ ಸ್ವದೇಶಿ ವಿನ್ಯಾಸ ಮತ್ತು ತಯಾರಿಸಿದ ಸೆಮಿ-ಹೈಸ್ಪೀಡ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 30 ರಂದು ಗಾಂಧಿನಗರದಲ್ಲಿ ಚಾಲನೆ ನೀಡಿದರು ಮತ್ತು ಮರುದಿನದಿಂದ ವಾಣಿಜ್ಯ ಚಾಲನೆ ಪ್ರಾರಂಭಿಸಲಾಯಿತು.

SCROLL FOR NEXT