ಪಣಜಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಿಲ್ಲಿಸಿ ಗುಜರಾತ್, ಹಿಮಾಚಲ ಪ್ರದೇಶದ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳಬೇಕು ಎಂದು ಗೋವಾದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಸಂಸದ ಫ್ರಾನ್ಸಿಸ್ಕೊ ಸರ್ಡಿನಾ ಸೋಮವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯನ್ನು ಸೋಲಿಸುವ ಏಕೈಕ ಪಕ್ಷ ಕಾಂಗ್ರೆಸ್. ಆದ್ದರಿಂದ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯನ್ನು ನಿಲ್ಲಿಸಿ ಹಿಮಾಚಲ ಪ್ರದೇಶ ಹಾಗೂ ಗುಜರಾತ್ ರಾಜ್ಯಗಳಿಗೆ ಹೋಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದ್ದಾರೆ.
"ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯನ್ನು ನಿಲ್ಲಿಸಿ ಹಿಮಾಚಲ ಪ್ರದೇಶ ಮತ್ತು ಗುಜರಾತ್‌ಗೆ ಹೋಗಿ ಸಾರ್ವಜನಿಕರನ್ನು ಜಾಗೃತಗೊಳಿಸಬೇಕೆಂದು ನಾನು ಬಯಸುತ್ತೇನೆ, ಬಿಜೆಪಿಗೆ ವಿರೋಧವಾಗಿರುವ ಏಕೈಕ ಪಕ್ಷ ಕಾಂಗ್ರೆಸ್ ಆಗಿದ್ದು, ಜನರು ಬಿಜೆಪಿಯನ್ನು ಸೋಲಿಸುವ ಏಕೈಕ ಪಕ್ಷಕ್ಕೆ ಮತ ಚಲಾಯಿಸುತ್ತಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರಾ ರಾಜಕೀಯ: ಬದ್ಧತೆ ಇಲ್ಲದ ಪಾರ್ಟ್ ಟೈಮ್ ರಾಜಕಾರಣಿ 'ಪಪ್ಪು'; ಬದಲಾಗಲಿದೆ 'ರಾಗಾ' ಇಮೇಜ್!
ಭಾರತ ಜೋಡಿಸಿ ಯಾತ್ರೆಗೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಸೆ.7ರಂದು ಚಾಲನೆ ದೊರೆತಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಯಾತ್ರೆಯ ನೇತೃತ್ವ ವಹಿಸಿದ್ದಾರೆ. ತಮಿಳುನಾಡು, ಕೇರಳ ಹಾದು ಬಂದಿರುವ ಯಾತ್ರೆಯು ಈಗ ಕರ್ನಾಟಕದ ಬಳ್ಳಾರಿಯಲ್ಲಿದೆ. ಜಮ್ಮುವಿನಲ್ಲಿ ಯಾತ್ರೆ ಅಂತ್ಯವಾಗಲಿದೆ.
ನವೆಂಬರ್ 12 ರಂದು ಹಿಮಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.