ನವದೆಹಲಿ: ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ಗುರುಗ್ರಾಮ್‌ನ ರಿಯಾನ್ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ನಡೆದ 7 ವರ್ಷದ ಬಾಲಕನ ಕೊಲೆ ಪ್ರಕರಣದ ಆರೋಪಿಗೆ ಐದು ವರ್ಷಗಳ ನಂತರ ಸುಪ್ರೀಂ ಕೋರ್ಟ್ ಗುರುವಾರ ಮಧ್ಯಂತರ ಜಾಮೀನು ನೀಡಿದೆ.
ಕೊಲೆ ಮಾಡಿದಾಗ 16 ವರ್ಷದ ಬಾಲಕನಾಗಿದ್ದ ಆರೋಪಿಯನ್ನು ಪ್ರಕರಣದಲ್ಲಿ ವಯಸ್ಕ ಎಂದು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಬಾಲ ನ್ಯಾಯ ಮಂಡಳಿ ಆದೇಶದ ಮೂರು ದಿನಗಳ ನಂತರ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.
ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಜೆ ಕೆ ಮಹೇಶ್ವರಿ ಅವರನ್ನೊಳಗೊಂಡ ಪೀಠ, ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೆ ಆರೋಪಿಯ ಬಂಧನ ಅವಧಿ ಮುಂದುವರಿಸುವುದರಿಂದ ಆತನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಹೇಳಿದೆ.
ಮಧ್ಯಂತರ ಕ್ರಮದ ಮೂಲಕ ಗುರುಗ್ರಾಮ್ ಸೆಷನ್ಸ್ ನ್ಯಾಯಾಧೀಶರು ವಿಧಿಸಬಹುದಾದ ಷರತ್ತುಗಳ ಮೇಲೆ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸೆಪ್ಟಂಬರ್ 8, 2017 ರಂದು ಗುರುಗ್ರಾಮ್‌ನ ಶಾಲೆಯ ವಾಶ್‌ರೂಮ್‌ನಲ್ಲಿ ಎರಡನೇ ತರಗತಿಯ ವಿದ್ಯಾರ್ಥಿ ಪ್ರದ್ಯುಮಾನ್ ನ ಗಂಟಲು ಸೀಳಿ ಹತ್ಯೆ ಮಾಡಲಾಗಿತ್ತು.