ದೇಶ

ಮಲಮಗ, ಪತಿಯ ಸ್ನೇಹಿತರಿಂದ ನಿರಂತರ ಅತ್ಯಾಚಾರ: ರಾಷ್ಟ್ರಪತಿ ಬಳಿ ದಯಾಮರಣ ಕೋರಿದ ಮಹಿಳೆ

Manjula VN

ಪಿಲಿಭಿತ್: ತನ್ನ ಮಲ ಮಗ ಮತ್ತು ತನ್ನ ಪತಿಯ ಸ್ನೇಹಿತರಿಂದ ತಿಂಗಳುಗಟ್ಟಲೆ ಅತ್ಯಾಚಾರಕ್ಕೊಳಗಾದ ಮಹಿಳೆಯೊಬ್ಬರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ದಯಾಮರಣಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. 

‘ನ್ಯಾಯದ ಮೇಲಿನ ಭರವಸೆಯನ್ನು ಕಳೆದುಕೊಂಡಿದ್ದೇನೆ’ ಎಂದು 30 ವರ್ಷದ ಸಂತ್ರಸ್ತ ಮಹಿಳೆ ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ಹೇಳಿಕೊಂಡಿದ್ದಾರೆ. 

ನ್ಯಾಯಾಲಯದ ಆದೇಶದ ನಂತರ ಅಕ್ಟೋಬರ್ 9 ರಂದು ಪುರನ್‌ಪುರ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದರೂ, ಪೊಲೀಸರು ಆರೋಪಿಗಳನ್ನು ಉದ್ದೇಶಪೂರ್ವಕವಾಗಿಯೇ ಬಂಧಿಸುತ್ತಿಲ್ಲ. ಅವರಿಂದ ನನಗೆ ಪದೇ ಪದೇ ಕೊಲೆ ಬೆದರಿಕೆಗಳು ಬರುತ್ತಿದೆ. ನನ್ನ ಮೇಲಿನ ದೌರ್ಜನ್ಯದ ಬಗ್ಗೆ ಮೌನವಾಗಿರುವಂತೆ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪಿಸಿದ್ದಾರೆ.

ನಾನು ಸಾಕಷ್ಟು ಹೋರಾಟ ಮಾಡಿದ್ದೇನೆ. ನ್ಯಾಯ ಸಿಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೇನೆ. ಆದ್ದರಿಂದ, ನಿಮ್ಮ (ರಾಷ್ಟ್ರಪತಿ) ಅನುಮತಿಯೊಂದಿಗೆ ನನ್ನ ಜೀವನವನ್ನು ಅಂತ್ಯಗೊಳಿಸುತ್ತೇನೆ ಎಂದು ಪತ್ರದಲ್ಲಿ ಹೇಳಿಕೊಂಡಿದ್ದಾರೆ.

ಮೊದಲ ಪತಿಯಿಂದ ವಿಚ್ಛೇದನ ಪಡೆದ ಬಳಿಕ ಚಂಡೀಗಢದ 55 ವರ್ಷದ ವಿಚ್ಛೇದಿತ ರೈತನೊಬ್ಬನನ್ನು ವಿವಾಹವಾಗಿದ್ದೆ. ನನ್ನ ಮಲಮಗ ನನ್ನೊಂದಿಗೆ ಲೈಂಗಿಕ ಸಂಪರ್ಕ ಬಯಸಿದ್ದ. ಪದೇ ಪದೆ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ವಿಷಯ ಬಹಿರಂಗಪಡಿಸಿದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೆದರಿಸಿದ್ದ. ಹೀಗಾಗಿ ಆರಂಭದಲ್ಲಿ ನಾನು ಮೌನವಾಗಿರಬೇಕಾಯಿತು. ನಾನು ಗರ್ಭಿಣಿಯಾದೆ. ಡಿಎನ್‌ಎ ಪರೀಕ್ಷೆಗೆ ಹೋಗಲು ಬಯಸಿದಾಗ ನನ್ನ ಹೊಟ್ಟೆಗೆ ಕರುಣೆಯೇ ಇಲ್ಲದಂತೆ ಹೊಡೆದರು. ಬಳಿಕ ಪುರನ್‌ಪುರದ ಖಾಸಗಿ ಆಸ್ಪತ್ರೆಯಲ್ಲಿ ಬಲವಂತವಾಗಿ ಗರ್ಭಪಾತ ಮಾಡಿಸಿದರು.

ಜುಲೈ 18 ರಂದು ಪತಿ ತನ್ನ ಸ್ನೇಹಿತನ ಫಾರ್ಮ್‌ಹೌಸ್‌ಗೆ ಕರೆದೊಯ್ದಿದ್ದರು. ಅಲ್ಲಿ ಆತನ ಸಂಬಂಧಿಕರೊಬ್ಬರು ಮತ್ತು ಇಬ್ಬರು ಸಹೋದ್ಯೋಗಿಗಳು ನನ್ನ ಮೇಲೆ ಅತ್ಯಾಚಾರ ಎಸಗಿದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಯಿತಾದರೂ ಅವರು ಕಿವಿಗೊಡಲೇ ಇಲ್ಲ.

ಬಳಿಕ ನಂತರ ನ್ಯಾಯಾಲಯ ಮೆಟ್ಟಿಲೇರಿ ಎಫ್‌ಐಆರ್‌ ದಾಖಲಾಗುವಂತೆ ಮಾಡಲಾಯಿತು. ಇತ್ತೀಚೆಗಷ್ಟೇ ಪುರನ್‌ಪುರ್ ಕೊತ್ವಾಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪತಿ ಮತ್ತು ಮಲಮಗ ಸೇರಿದಂತೆ ಐವರ ವಿರುದ್ಧ ಐಪಿಸಿ ಸೆಕ್ಷನ್ 376-ಡಿ (ಗ್ಯಾಂಗ್-ರೇಪ್), 323 (ಗಾಯಗೊಳಿಸುವುದು), 504 (ಉದ್ದೇಶಪೂರ್ವಕ ಅವಮಾನ) ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಯಾವುದೇ ಬಂಧನವಾಗಿಲ್ಲ ಎಂದು ಮಹಿಳೆ ವಿವರಿಸಿದ್ದಾರೆ. 

ಪ್ರಸ್ತುತ ಮಹಿಳೆ ತನ್ನ ತಾಯಿ, ಸಹೋದರ ಮತ್ತು ಆರು ವರ್ಷದ ಮಗನೊಂದಿಗೆ ಬರೇಲಿಯಲ್ಲಿ ವಾಸಿಸುತ್ತಿದ್ದಾರೆ.

ಪ್ರಕರಣ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಪ್ರಭು ಅವರು ಮಾತನಾಡಿ, ‘ಇದು ಸಂಕೀರ್ಣ ಪ್ರಕರಣವಾಗಿದ್ದು, ನಾವು ನ್ಯಾಯಯುತ ತನಿಖೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಪ್ರಕರಣವನ್ನು ಇತ್ಯರ್ಥ ಮಾಡಲಾಗುತ್ತದೆ. ಬಳಿಕ ಸೂಕ್ತ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

SCROLL FOR NEXT