ದೇಶ

ಮೋರ್ಬಿ ಸೇತುವೆ ದುರಂತ: 5 ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದ ಗುಜರಾತ್ ಸರ್ಕಾರ!

Vishwanath S

ಮೊರ್ಬಿ(ಗುಜರಾತ್): ಮೋರ್ಬಿ ಸೇತುವೆ ಕುಸಿತದ ದುರಂತದಲ್ಲಿ ಕನಿಷ್ಠ 80 ಜನರು ಸಾವನ್ನಪ್ಪಿದ್ದಾರೆ. ದುರಂತದ ಬಗ್ಗೆ ಸರ್ಕಾರ ಕ್ರಮ ಕೈಗೊಂಡಿದೆ.

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಇನ್ನು ಸಿಎಂ ಐಎಎಸ್ ಅಧಿಕಾರಿ ನೇತೃತ್ವದ ಐದು ಸದಸ್ಯರ ವಿಶೇಷ ತನಿಖಾ ತಂಡವನ್ನು(ಎಸ್‌ಐಟಿ) ರಚಿಸಿದ್ದಾರೆ.

ಪೌರಾಡಳಿತ ಆಯುಕ್ತ ರಾಜ್‌ಕುಮಾರ್ ಬೇನಿವಾಲ್, ಸಂದೀಪ್ ವಾಸವ, ಪೊಲೀಸ್ ಮಹಾನಿರೀಕ್ಷಕ ಸುಭಾಷ್ ತ್ರಿವೇದಿ ಮತ್ತು ರಚನಾತ್ಮಕ ಮತ್ತು ಗುಣಮಟ್ಟ ನಿಯಂತ್ರಣದಲ್ಲಿ ಪರಿಣತಿ ಹೊಂದಿರುವ ಇಬ್ಬರು ಎಂಜಿನಿಯರ್‌ಗಳು ಎಸ್‌ಐಟಿಯ ನೇತೃತ್ವ ವಹಿಸಲಿದ್ದಾರೆ. ರಾಜ್ಯ ಸರ್ಕಾರವು ನಾಲ್ಕು ಎನ್‌ಡಿಆರ್‌ಎಫ್ ತಂಡಗಳನ್ನು ಹಾಗೂ ರಕ್ಷಣಾ ಸಿಬ್ಬಂದಿಯನ್ನು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಿದೆ. ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಪಕ್ಕದ ಜಿಲ್ಲೆಗಳಿಂದ ಈಜುಗಾರರು ಮತ್ತು ಡೈವರ್‌ಗಳನ್ನು ಸಹ ನಿಯೋಜಿಸಿದೆ.

ನೂರಾರು ಜನರು ಸೇತುವೆ ಮೇಲೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ರಕ್ಷಣಾ ಸಿಬ್ಬಂದಿ ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇಲ್ಲಿಯವರೆಗೂ 30 ಮಕ್ಕಳ ಸೇರಿದಂತೆ 80 ಮಂದಿ ಸಾವನ್ನಪ್ಪಿದ್ದಾರೆ.

ಸಂಜೆ 6.30ರ ಸುಮಾರಿಗೆ ಈ ದುರಂತ ಸಂಭವಿಸಿದ್ದು ಈ ವೇಳೆ ಸೇತುವೆ ಮೇಲೆ ಮಕ್ಕಳು, ವೃದ್ಧರೂ ಸೇರಿದಂತೆ 400ಕ್ಕೂ ಹೆಚ್ಚು ಜನರು ನೆರೆದಿದ್ದರು. ಸೇತುವೆ ಕುಸಿತದಿಂದಾಗಿ ಹಲವಾರು ಜನರು ನದಿಗೆ ಬಿದ್ದಿದ್ದಾರೆ. ಸದ್ಯ 250ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು ಕಾರ್ಯಾಚರಣೆ ಭರದಿಂದ ಸಾಗಿದೆ.

ಮೃತರ ಕುಟುಂಬಕ್ಕೆ ಪ್ರಧಾನಿ ಮೋದಿ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ 50 ಸಾವಿರ ಪರಿಹಾರ ಘೋಷಿಸಿದ್ದಾರೆ. ಇನ್ನು ಗುಜರಾತ್ ಸಿಎಂ ಭುಪೇಂದ್ರ ಪಾಟೀಲ್ ಮೃತರ ಕುಟುಂಬಕ್ಕೆ 4 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಇನ್ನು ಸೇತುವೆ ಮೇಲೆ ಜನರು ಕಿಕ್ಕಿರಿದು ತುಂಬಿರುವ ವಿಡಿಯೋವೊಂದು ವೈರಲ್ ಆಗಿದೆ. ಇನ್ನು ಕೆಲ ಯುವಕರು ಹುಚ್ಚಾಟ ಮೆರೆದಿದ್ದು ಸೇತುವೆಗೆ ಅಳವಡಿಸಿದ್ದ ಕಬ್ಬಿಣದ ಸರಳುಗಳನ್ನು ಕಾಲಿನಿಂದ ಒದೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

SCROLL FOR NEXT