ದೇಶ

ಅಸ್ಸಾಂ: ಅವಧಿಗೂ ಮುನ್ನವೇ ಸಿಸೇರಿಯನ್ ಮಾಡಿ, ಸತ್ಯ ತಿಳಿಯುತಿದ್ದಂತೆ ಮತ್ತೆ ಹೊಲಿಗೆ ಹಾಕಿದ ವೈದ್ಯರು!

Lingaraj Badiger

ಕರೀಂಗಂಜ್: ಅಸ್ಸಾಂ ಸರ್ಕಾರಿ ಆಸ್ಪತ್ರೆಯ ಸ್ತ್ರೀರೋಗತಜ್ಞರೊಬ್ಬರು ಗರ್ಭಿಣಿ ಮಹಿಳೆಗೆ ನಿಗದಿತ ದಿನಾಂಕಕ್ಕಿಂತ ಮೂರೂವರೆ ತಿಂಗಳ ಮೊದಲು ಸಿಸೇರಿಯನ್ ಶಸ್ತ್ರಚಿಕಿತ್ಸೆ ಅಥವಾ ಸಿ-ಸೆಕ್ಷನ್ ಮಾಡಿ, ನಂತರ  ಪುನಃ ಹೊಲಿಗೆ ಹಾಕಿರುವ ಘಟನೆ ಬಯಲಾಗಿದೆ. ಸಿ ಸೆಕ್ಷನ್ ವೇಳೆ ಇನ್ನೂ ಬೆಳವಣಿಗೆಯಾಗದ ಭ್ರೂಣ ನೋಡಿ ಮತ್ತೆ ಹೊಲಿಗೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ನಡೆದ ಕರೀಮ್‌ಗಂಜ್ ಸಿವಿಲ್ ಆಸ್ಪತ್ರೆಯ ಅಧಿಕಾರಿಗಳು, ಸತ್ಯಾಂಶ ಖಚಿತಪಡಿಸಿಕೊಳ್ಳಲು ವಿಚಾರಣೆ ನಡೆಸಲಾಗುತ್ತಿದೆ ಎಂದು ಭಾನುವಾರ ಹೇಳಿದ್ದಾರೆ. ವೈದ್ಯರು ಈ ವಿಷಯವನ್ನು ಮುಚ್ಚಿಡಲು ಪ್ರಯತ್ನಿಸಿದರು ಮತ್ತು ಮಹಿಳೆಯ ಕುಟುಂಬಕ್ಕೂ ಯಾರೊಂದಿಗೂ ಚರ್ಚಿಸದಂತೆ ಕೇಳಿಕೊಂಡಿದ್ದರು. ಆದರೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಮಹಿಳೆಯ ಆರೋಗ್ಯ ಹದಗೆಟ್ಟಾಗ ಆಕೆಯ ಸಂಬಂಧಿಕರು ಮತ್ತು ನೆರೆಹೊರೆಯವರಿಗೆ ಘಟನೆ ಬಗ್ಗೆ ತಿಳಿಸಿದ್ದಾರೆ.

ಅವಧಿಗೂ ಮುನ್ನವೇ ಸಿಸೇರಿಯನ್ ಮಾಡಿದ ಬಗ್ಗೆ ನಮಗೆ ದೂರು ಬಂದಿದೆ. ನಾವು ಸತ್ಯವನ್ನು ತಿಳಿಯಲು ವಿಚಾರಣೆ ನಡೆಸುತ್ತಿದ್ದೇವೆ. ವೈದ್ಯರು ಅಥವಾ ಬೇರೆಯವರ ವಿರುದ್ಧ ಸದ್ಯಕ್ಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದರೆ ತಪ್ಪು ಕಂಡುಬಂದಲ್ಲಿ ತನಿಖಾ ವರದಿಯನ್ನು ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಪರಿಶೀಲಿಸಲು 11 ಸದಸ್ಯರ ಸಮಿತಿಯನ್ನು ರಚಿಸಲಾಗಿದ್ದು, ಶುಕ್ರವಾರ ಪ್ರಾಥಮಿಕ ವರದಿಯನ್ನು ಸಲ್ಲಿಸಲಾಗಿದೆ ಎಂದು ಅವರು ಹೇಳಿದರು. ನಾವು ಪ್ರಾಥಮಿಕ ವರದಿಯನ್ನು ಗುವಾಹಟಿಯ ಆರೋಗ್ಯ ಇಲಾಖೆಗೆ ರವಾನಿಸಿದ್ದೇವೆ. ನಾವು ಸಂಪೂರ್ಣ ವರದಿಯ ಸಲ್ಲಿಕೆಗಾಗಿ ಕಾಯುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಆ.21ರಂದು ಅಸ್ವಸ್ಥಗೊಂಡ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಕಾಲ ಆಕೆಯನ್ನು ಅಬ್ಸರ್ವೇಷನ್‌ನಲ್ಲಿಟ್ಟು, ನಂತರ ಡಿಸೆಂಬರ್ ಆರಂಭದಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡುವುದಾಗಿ ತಿಳಿಸಿದ್ದರು. ಆದರೆ ವೈದ್ಯರು ಯಾವುದೇ ಅಲ್ಟ್ರಾಸೌಂಡ್ ಪರೀಕ್ಷೆಯನ್ನು ನಡೆಸದೆ ಆಗಸ್ಟ್ 23 ರಂದು ಸಿ-ಸೆಕ್ಷನ್‌ಗೆ ಹೋಗಲು ನಿರ್ಧರಿಸಿದರು ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಗರ್ಭ ಕೊಯ್ದ ನಂತರ ಭ್ರೂಣವು ಬೆಳವಣಿಗೆಯಾಗಿಲ್ಲ ಎಂದು ವೈದ್ಯರು ಅರಿತುಕೊಂಡು ಮತ್ತೆ ಭ್ರೂಣವನ್ನು ಒಳಗೆ ಬಿಟ್ಟು ಹೊಲಿಗೆ ಹಾಕಿದರು. ಮಹಿಳೆಯನ್ನು ಆಗಸ್ಟ್ 31 ರಂದು ಡಿಸ್ಚಾರ್ಜ್ ಮಾಡಲಾಗಿದ್ದು, ಈ ವಿಷಯವನ್ನು ಯಾರಿಗೂ ತಿಳಿಸದಂತೆ ವೈದ್ಯರು ಕುಟುಂಬಕ್ಕೆ ಕೇಳಿಕೊಂಡಿದ್ದರು. ಆದರೆ ಮನೆಗೆ ಹಿಂತಿರುಗಿದ ನಂತರ ಮಹಿಳೆಯ ಆರೋಗ್ಯವು ಹದಗೆಟ್ಟಾಗ ಆಕೆಯ ನೆರೆಹೊರೆಯವರು ಮತ್ತು ಸಂಬಂಧಿಕರಿಗೆ ವಿಷಯ ತಿಳಿಯಿತು.

ಇದರಿಂದ ಕುಪಿತಗೊಂಡ ಕುಟುಂಬಸ್ಥರು ಆಸ್ಪತ್ರೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ತನಿಖೆಗೆ ಒತ್ತಾಯಿಸಿದ್ದಾರೆ. ಸದ್ಯ ಮಹಿಳೆಯನ್ನು ಅದೇ ಆಸ್ಪತ್ರೆಗೆ ದಾಖಲಿಸಲಾಗಿದೆ.

SCROLL FOR NEXT