ದೇಶ

ಉಕ್ರೇನ್‌ನಿಂದ ಹಿಂತಿರುಗಿರುವ ವಿದ್ಯಾರ್ಥಿಗಳು ವಿದೇಶಿ ವೈದ್ಯಕೀಯ ಕಾಲೇಜುಗಳಲ್ಲಿ ಓದಬಹುದು: ಎನ್‌ಎಂಸಿ

Ramyashree GN

ನವದೆಹಲಿ: ರಷ್ಯಾ ಮತ್ತು ಉಕ್ರೇನ್ ಸಂಘರ್ಷದ ನಂತರ ದೇಶಕ್ಕೆ ಮರಳಿರುವ ವೈದ್ಯಕೀಯ ವಿದ್ಯಾರ್ಥಿಗಳು ಇತರ ದೇಶಗಳ ವೈದ್ಯಕೀಯ ಕಾಲೇಜುಗಳಿಗೆ ವರ್ಗಾವಣೆ ಪಡೆಯಲು ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಅನುಮತಿ ನೀಡಿದೆ.

ವಿದೇಶಗಳಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಕೋರ್ಸ್‌ನ ಮಧ್ಯದಲ್ಲಿ ಇತರ ರಾಜ್ಯಗಳಿಗೆ ತರಳಲು ಸಾಧ್ಯವಾಗದಿದ್ದರೂ, ಉಕ್ರೇನ್‌ನಲ್ಲಿ ಸದ್ಯದ ಪರಿಸ್ಥಿತಿಯನ್ನು ಪರಿಗಣಿಸಿ, ಎನ್‌ಎಂಸಿ ಇತ್ತೀಚಿನ ಅಧಿಸೂಚನೆಯಲ್ಲಿ ಉಕ್ರೇನ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಶೈಕ್ಷಣಿಕ ವರ್ಗಾವಣೆಗೆ ಯಾವುದೇ ಆಕ್ಷೇಪಣೆಯಿಲ್ಲ ಎಂದು ತಿಳಿಸಿದೆ.

ಹಿಂದಿನ ನಿಯಮವು 'ಸಂಪೂರ್ಣ ಕೋರ್ಸ್, ತರಬೇತಿ ಮತ್ತು ಇಂಟರ್ನ್‌ಶಿಪ್ ಅಥವಾ ಕ್ಲರ್ಕ್‌ಶಿಪ್ ಅನ್ನು ಅಧ್ಯಯನದ ಅವಧಿಯಲ್ಲಿ ಅದೇ ವಿದೇಶಿ ವೈದ್ಯಕೀಯ ಸಂಸ್ಥೆಯಲ್ಲಿಯೇ ಮಾಡಬೇಕು ಅಥವಾ ತರಬೇತಿ ಹಾಗೂ ಇಂಟರ್ನ್‌ಶಿಪ್‌ನ ಯಾವುದೇ ಭಾಗವನ್ನು ಮತ್ತೊಂದು ಸಂಸ್ಥೆಯಲ್ಲಿ ಮಾಡುವಂತಿಲ್ಲ' ಎಂದು ಹೇಳಿತ್ತು.

ರಷ್ಯಾ ಸಾರಿರುವ ಯುದ್ಧದ ನಡುವೆಯೂ ಉಕ್ರೇನ್‌ನಲ್ಲಿ ವಿಶ್ವವಿದ್ಯಾನಿಲಯಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿದ್ದರೂ ಕೂಡ, ಚಾಲ್ತಿಯಲ್ಲಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಗಳಿಂದಾಗಿ ವಿದ್ಯಾರ್ಥಿಗಳಿಗೆ ಮತ್ತೆ ಅಲ್ಲಿ ಹಾಜರಾಗಲು ಸಾಧ್ಯವಾಗುತ್ತಿಲ್ಲ.

ಉಕ್ರೇನ್‌ನಿಂದ ಹಿಂದಿರುಗಿದ ಹೆಚ್ಚಿನ ವಿದ್ಯಾರ್ಥಿಗಳು ತಾತ್ಕಾಲಿಕ ಪರಿಹಾರವಾಗಿ ಭಾರತೀಯ ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಸೀಟುಗಳನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ. ಆದರೆ, ಎನ್‌ಎಂಸಿ ಅಥವಾ ಕೇಂದ್ರ ಆರೋಗ್ಯ ಸಚಿವಾಲಯದಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಎನ್‌ಎಂಸಿ ಕಾಯ್ದೆಯ ಪ್ರಕಾರ, ವಿದೇಶಿ ವೈದ್ಯಕೀಯ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಅಲ್ಲಿಯೇ ಪೂರ್ಣಗೊಳಿಸಬೇಕು ಮತ್ತು ಒಂದೇ ವಿಶ್ವವಿದ್ಯಾಲಯದಿಂದ ಪದವಿ ಪಡೆಯಬೇಕು ಎಂಬ ನಿಯಮವಿದೆ.

ಮಂಗಳವಾರ ಎನ್‌ಎಂಸಿ ಹೊರಡಿಸಿದ ಸಾರ್ವಜನಿಕ ಅಧಿಸೂಚನೆಯಲ್ಲಿ, ಉಕ್ರೇನ್‌ನಿಂದ ಹಿಂತಿರುಗಿರುವ ವಿದ್ಯಾರ್ಥಿಗಳು ಯಾವುದೇ ವಿದೇಶಿ ವೈದ್ಯಕೀಯ ಕಾಲೇಜಿಗೆ ವರ್ಗಾವಣೆ ಮಾಡಿಕೊಳ್ಳುವ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಸಮಾಲೋಚಿಸಿ ಆಯೋಗದಲ್ಲಿ ಪರಿಗಣಿಸಲಾಗಿದೆ. ಈ ಶೈಕ್ಷಣಿಕ ಚಲನಶೀಲತೆ ಕಾರ್ಯಕ್ರಮವು ಜಾಗತಿಕವಾಗಿ ವಿವಿಧ ದೇಶಗಳ ಇತರ ವಿಶ್ವವಿದ್ಯಾಲಯಗಳಿಗೆ ಮಾಡಿಕೊಳ್ಳುವ ತಾತ್ಕಾಲಿಕ ಸ್ಥಳಾಂತರ ಎಂದು ತಿಳಿಸಲಾಗಿದೆ.
ಆದಾಗ್ಯೂ, ಪದವಿಯನ್ನು ಪೋಷಕ ಉಕ್ರೇನ್ ವಿಶ್ವವಿದ್ಯಾನಿಲಯವೇ ನೀಡಲಿದೆ ಎಂದು ಎನ್‌ಎಂಸಿ ತಿಳಿಸಿದೆ.

'2002ರ ಸ್ಕ್ರೀನಿಂಗ್ ಪರೀಕ್ಷಾ ನಿಯಮಗಳ ಇತರ ಮಾನದಂಡಗಳನ್ನು ಪೂರೈಸಿದರೆ ಉಕ್ರೇನ್‌ನಲ್ಲಿ ಅಧ್ಯಯನ ಮಾಡುತ್ತಿರುವ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಶೈಕ್ಷಣಿಕ ಚಲನಶೀಲತೆ ಕಾರ್ಯಕ್ರಮಕ್ಕೆ ಆಯೋಗವು ಯಾವುದೇ ಆಕ್ಷೇಪಣೆ ಇಲ್ಲ ಎಂದು ಈ ಮೂಲಕ ತಿಳಿಸುತ್ತದೆ' ಎಂದು ಸಾರ್ವಜನಿಕ ಪ್ರಕಟಣೆ ತಿಳಿಸಿದೆ.

SCROLL FOR NEXT