ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ವರ್ಸಸ್ ಎಎಪಿ ನಡುವಿನ ಮುಸುಕಿನ ಗುದ್ದಾಟದ ನಡುವೆಯೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರನ್ನು ಶುಕ್ರವಾರ ಭೇಟಿಯಾದರು. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮೇಲೆ ಸಿಬಿಐ ದಾಳಿ ನಡೆಸಿದ ನಂತರ ಕಳೆದ ಮೂರು ಬಾರಿ ಲೆಫ್ಟಿನೆಂಟ್ ಗವರ್ನರ್ ಜೊತೆಗಿನ ಭೇಟಿ ತಪ್ಪಿಸಿದ ಕೇಜ್ರಿವಾಲ್ ಇಂದು ವಿಕೆ ಸಕ್ಸೇನಾ ಅವರನ್ನು ಭೇಟಿಯಾದರು.
ಕೊನೆಯ ಬಾರಿಗೆ ಆಗಸ್ಟ್ 12 ರಂದು ಭೇಟಿಯಾಗಿದ್ದ ಕೇಜ್ರಿವಾಲ್ ಆಗಸ್ಟ್ 19 ರಂದು ಮದ್ಯದ ನೀತಿಯಲ್ಲಿನ ಹಗರಣದ ಮೇಲೆ ಸಿಸೋಡಿಯಾ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿದ ದಿನ ಲೆಫ್ಟಿನೆಂಟ್ ಗವರ್ನರ್ ಭೇಟಿ ತಪ್ಪಿಸಿದರು. ಮುಂದಿನ ಶುಕ್ರವಾರ ಆಗಸ್ಟ್ 26 ರಂದು ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯವಾದ ಗುಜರಾತ್‌ನಲ್ಲಿದ್ದ ಕಾರಣ ಭೇಟಿಯಾಗಿರಲಿಲ್ಲ.
ಖಾಸಗಿ ಉದ್ಯಮಿಗಳನ್ನು ಮದ್ಯದ ದಂಧೆಗೆ ತಂದ ಹೊಸ ಅಬಕಾರಿ ನೀತಿಯ ಕುರಿತು ಸಿಬಿಐ ತನಿಖೆಗೆ ಆದೇಶಿಸಿದ ನಂತರ ಇಂದು ಮೂರನೇ ಶುಕ್ರವಾರ ಕೇಜ್ರಿವಾಲ್ ಲೆಫ್ಟಿನೆಂಟ್ ಗವರ್ನರ್ ಅವರನ್ನು ಭೇಟಿ ಮಾಡಿದರು. ಇಂದಿನ ಸಭೆಗೆ ಸಂಬಂಧಿಸಿದಂತೆ ಇದು ದಿನನಿತ್ಯದ ಆಡಳಿತಾತ್ಮಕ ವಿಷಯಗಳನ್ನು ಚರ್ಚಿಸುವ ಭೇಟಿ ಎಂದಿದ್ದು ಕಾರ್ಯಸೂಚಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿಲ್ಲ.
ಕೇಜ್ರಿವಾಲ್ ನೇತೃತ್ವದ ಎಎಪಿ, ಸಿಬಿಐ ತನಿಖೆ ಮತ್ತು ಎಲ್ಲವೂ ಪ್ರಧಾನಿ ನರೇಂದ್ರ ಮೋದಿ ಮತ್ತು ಲೆಫ್ಟಿನೆಂಟ್ ಗವರ್ನರ್ ನೇಮಕ ಮಾಡುವ ಬಿಜೆಪಿ ಸರ್ಕಾರದ ತಂತ್ರ ಎಂದು ಹೇಳಿದೆ. ಸಿಬಿಐನಂತಹ ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡು ರಾಜಕೀಯ ರಾಜಕೀಯ ಸೇಡು ನಡೆಸುತ್ತಿದೆ ಎಂದು ಎಎಪಿ ಪಕ್ಷ ಹೇಳಿದೆ.
ಇತ್ತೀಚಿಗೆ ತಮ್ಮ ವಿರುದ್ಧ ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಕಳುಹಿಸಿದ್ದ ಮಾನನಷ್ಟ ನೋಟಿಸ್ ಅನ್ನು ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಹರಿದು ಹಾಕಿದ್ದರು. ಭಾರತದ ಸಂವಿಧಾನವು ನನಗೆ ಸತ್ಯವನ್ನು ಮಾತನಾಡುವ ಹಕ್ಕನ್ನು ನೀಡಿದೆ ಎಂದು ಸಂಜಯ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಕಳ್ಳ, ಭ್ರಷ್ಟರು ಕಳುಹಿಸಿರುವ ಈ ನೋಟಿಸ್‌ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಇಂತಹ ಸೂಚನೆಗಳನ್ನು 10 ಬಾರಿ ಹರಿದು ಎಸೆಯಬಹುದು ಎಂದು ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ಖಾದಿ ಗ್ರಾಮೋದ್ಯೋಗದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ವಿಕೆ ಸಕ್ಸೇನಾ ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂದು ಎಎಪಿ ಆರೋಪಿಸಿತ್ತು. ಖಾದಿ ಅಧ್ಯಕ್ಷರಾಗಿ 1,400 ಕೋಟಿ ರೂ. ಮೌಲ್ಯದ ನಿಷೇಧಿತ ಕರೆನ್ಸಿ ನೋಟುಗಳನ್ನು ಬದಲಾಯಿಸಿದ್ದಾರೆ ಎಂದು ಎಎಪಿ ಆರೋಪಿಸಿದೆ. ಆರೋಪದ ಬಗ್ಗೆ 48 ಗಂಟೆಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಆಮ್ ಆದ್ಮಿ ಪಕ್ಷದ ಮುಖಂಡರಾದ ಅತಿಶಿ, ದುರ್ಗೇಶ್ ಪಾಠಕ್, ಸೌರಭ್ ಭಾರದ್ವಾಜ್, ಸಂಜಯ್ ಸಿಂಗ್ ಮತ್ತು ಜಾಸ್ಮಿನ್ ಶಾ ಅವರಿಗೆ ನೋಟಿಸ್ ಕಳುಹಿಸಿದ್ದರು.