ದೇಶ

ಅಕ್ರಮ ಹಣ ವರ್ಗಾವಣೆ ಪ್ರಕರಣ: ದೆಹಲಿ ಪೊಲೀಸರಿಂದ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಹೊಸ ಸಮನ್ಸ್

Lingaraj Badiger

ನವದೆಹಲಿ: ಸುಕೇಶ್ ಚಂದ್ರಶೇಖರ್‌ಗೆ ಸಂಬಂಧಿಸಿದ 200 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 14ರಂದು ವಿಚಾರಣೆಗೆ ಹಾಜರಾಗುವಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್‌ ಅವರಿಗೆ ದೆಹಲಿ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗ(ಇಒಡಬ್ಲ್ಯು) ಸೋಮವಾರ ಹೊಸ ಸಮನ್ಸ್ ಜಾರಿ ಮಾಡಿದೆ.

ನಟಿ ಜಾಕ್ವೆಲಿನ್ ಇಂದು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ 15 ದಿನ ಸಮಯ ಕೋರಿದ್ದರು. ಇದಕ್ಕೆ ಒಪ್ಪದ ದೆಹಲಿ ಪೊಲೀಸರು ಸೋಮವಾರ ನಿಗದಿಯಾಗಿದ್ದ ವಿಚಾರಣೆಯನ್ನು ಮುಂದೂಡಿದ್ದಾರೆ. ಆದರೆ ನಟಿಗೆ ಹೆಚ್ಚು ಸಮಯ ನೀಡದೇ ಬುಧವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ತನಿಖೆಗೆ ಹಾಜರಾಗುವಂತೆ ಫರ್ನಾಂಡಿಸ್‌ಗೆ ಪೊಲೀಸರು ಸಮನ್ಸ್‌ ಜಾರಿ ಮಾಡಿರುವುದು ಇದು ಮೂರನೇ ಬಾರಿ. ಸೆಪ್ಟಂಬರ್ 14 ರಂದು ಇಒಡಬ್ಲ್ಯೂ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ವಿಚಾರಣೆಗೆ ಹಾಜರಾಗುವಂತೆ ಜಾಕ್ವೆಲಿನ್‌ಗೆ ಹೊಸದಾಗಿ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಎಎನ್‌ಐಗೆ ಖಚಿತಪಡಿಸಿದ್ದಾರೆ.

ಜಾರಿ ನಿರ್ದೇಶನಾಲಯ ತನ್ನ ಚಾರ್ಜ್‌ಶೀಟ್‌ನಲ್ಲಿ ಚಂದ್ರಶೇಖರ್ ವಂಚಿಸಿದ ಹಣವನ್ನು ಹೇಗೆ ಬಳಸಿದ್ದಾರೆ ಎಂದು ಉಲ್ಲೇಖಿಸಿದೆ. ತನ್ನ ಪೂರಕ ಆರೋಪಪಟ್ಟಿಯಲ್ಲಿ, ಚಂದ್ರಶೇಖರ್ ಅವರು ವಂಚಿಸಿದ ಮೊತ್ತದಿಂದ  5 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಉಡುಗೊರೆಗಳನ್ನು ಜಾಕ್ವೆಲಿನ್ ಫರ್ನಾಂಡೀಸ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಪರಾಧದ ಆದಾಯದಿಂದ ಉಡುಗೊರೆಗಳನ್ನು ಖರೀದಿಸಲಾಗಿದೆ ಎಂದು ಆಕೆಗೆ ತಿಳಿದಿತ್ತು ಎಂದು ಆರೋಪಿಸಿ ನಟಿಯನ್ನು ಆರೋಪಿ ಎಂದು ಹೆಸರಿಸಿದೆ.

SCROLL FOR NEXT