ದೇಶ

ಗೋವಾ ಸಿಎಲ್‌ಪಿ ನಾಯಕರಾಗಿ ಯೂರಿ ಅಲೆಮಾವೊರನ್ನು ನೇಮಿಸಿದ ಕಾಂಗ್ರೆಸ್

Ramyashree GN

ನವದೆಹಲಿ: ತನ್ನ ಎಂಟು ಶಾಸಕರು ಬಿಜೆಪಿಗೆ ಸೇರಿದ ಕೆಲವೇ ದಿನಗಳ ಬಳಿಕ ಕಾಂಗ್ರೆಸ್ ಮಂಗಳವಾರ ಯೂರಿ ಅಲೆಮಾವೊ ಅವರನ್ನು ಗೋವಾದಲ್ಲಿ ತನ್ನ ನೂತನ ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸಿದೆ.

ಅಲೆಮಾವೊ (37) ಅವರು ಕುಂಕೋಲಿಮ್‌ನ ಶಾಸಕ.

'ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಯೂರಿ ಅಲೆಮಾವೊ ಅವರನ್ನು ಗೋವಾದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕರಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಿದ್ದಾರೆ' ಎಂದು ಪಕ್ಷದ ಅಧಿಕೃತ ಸಂವಹನ ಮೂಲಗಳು ತಿಳಿಸಿವೆ.

ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಕಾಂಗ್ರೆಸ್ ತನ್ನ ಮಾಜಿ ಸಿಎಲ್‌ಪಿ ನಾಯಕ ಮೈಕೆಲ್ ಲೋಬೊ ಅವರನ್ನು ಈ ಹಿಂದೆ ತೆಗೆದುಹಾಕಿತ್ತು.

ಸೆಪ್ಟೆಂಬರ್ 14 ರಂದು ಶಾಸಕರಾದ ದಿಗಂಬರ್ ಕಾಮತ್, ಮೈಕೆಲ್ ಲೋಬೊ, ದೇಲಿಲಾ ಲೋಬೊ, ಕೇದಾರ್ ನಾಯ್ಕ್, ರಾಜೇಶ್ ಫಾಲ್‌ದೇಸಾಯಿ, ಸಂಕಲ್ಪ್ ಅಮೋನ್ಕರ್, ರುಡಾಲ್ಫ್ ಫೆರ್ನಾಂಡಿಸ್ ಮತ್ತು ಅಲೆಕ್ಸೋ ಸಿಕ್ವೇರಾ ಅವರು ಸಿಎಲ್‌ಪಿ ಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಿದ ನಂತರ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

40 ಸದಸ್ಯ ಬಲದ ವಿಧಾನಸಭೆಯಲ್ಲಿ ವಿರೋಧ ಪಕ್ಷ ಈಗ ಕೇವಲ ಮೂರು ಶಾಸಕರನ್ನು ಹೊಂದಿದೆ.

ಗೋವಾದ 11 ಕಾಂಗ್ರೆಸ್ ಶಾಸಕರ ಪೈಕಿ ಎಂಟು ಮಂದಿ ಶಾಸಕಾಂಗ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವ ನಿರ್ಣಯವನ್ನು ಬುಧವಾರ (ಸೆ.14) ಅಂಗೀಕರಿಸಿದ್ದಾರೆ.

ಈ ವರ್ಷ ಮಾರ್ಚ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ವಿಧಾನಸಭೆಯಲ್ಲಿ 20 ಶಾಸಕರಿದ್ದಾರೆ.

SCROLL FOR NEXT