ದೇಶ

ಉತ್ತರಾಖಂಡ್ ರೆಸಾರ್ಟ್ ನಲ್ಲಿ ಹದಿಹರೆಯದ ರಿಸೆಪ್ಷನಿಸ್ಟ್ ಹತ್ಯೆ: ಮೃತದೇಹ ಚೀಲಾ ಕಾಲುವೆಯಲ್ಲಿ ಪತ್ತೆ

Nagaraja AB

ಡೆಹ್ರಾಡೂನ್: ಹದಿಹರೆಯದ ಮಹಿಳಾ ರಿಸೆಪ್ಷನಿಸ್ಟ್ ಮೃತದೇಹವನ್ನು ಪೊಲೀಸರು ಇಂದು ಬೆಳಗ್ಗೆ ಚೀಲಾ ಕಾಲುವೆಯಿಂದ ವಶಕ್ಕೆ ಪಡೆದಿದ್ದಾರೆ. ಬಿಜೆಪಿ ಮುಖಂಡರೊಬ್ಬರ ಪುತ್ರ ಅಕ್ರಮವಾಗಿ ನಡೆಸುತ್ತಿದ್ದ ರೆಸಾರ್ಟ್ ನಲ್ಲಿ ಈ ಹತ್ಯೆ ನಡೆದಿದ್ದು, ಆರೋಪಿಗಳು ಆಕೆಯ ಮೃತದೇಹವನ್ನು ಕಾಲುವೆಯಲ್ಲಿ ಹೂತ್ತಿದ್ದರು.

ಈ ಪ್ರಕರಣದ ಬೆಳವಣಿಗೆಯನ್ನು ಉತ್ತರ ಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಘಟನೆಯಿಂದ ತುಂಬಾ ನೋವಾಗಿರುವುದಾಗಿ ತಿಳಿಸಿದ್ದರು. 

ಹರಿದ್ವಾರದ ಬಿಜೆಪಿ ಮುಖಂಡ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಈತ ಮಾಲೀಕತ್ವದ ರೆಸಾರ್ಟ್ ನಲ್ಲಿ ಹತ್ಯೆಗೀಡಾದ ಮಹಿಳೆ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. 

19 ವರ್ಷದ ಯುವತಿಯ ಹತ್ಯೆ ಪ್ರಕರಣವನ್ನು ತ್ವರಿತಗೊಳಿಸಲು ತನಿಖೆ ನಡೆಸಲು ಡಿಐಜಿ ಪೊಲೀಸ್ ಪಿ ರೇಣುಕಾ ದೇವಿ ಎಸ್ ಐಟಿ ರಚಿಸಿದ್ದಾರೆ. ಪೌರಿ ಜಿಲ್ಲೆಯ ಯಮಕೇಶ್ವರ ಬ್ಲಾಕ್‌ನಲ್ಲಿ ಬಿಜೆಪಿ ನಾಯಕನ ಮಗ ಅಕ್ರಮವಾಗಿ ನಿರ್ಮಿಸಿದ್ದ ರೆಸಾರ್ಟ್ ಅನ್ನು ಶುಕ್ರವಾರ ತಡರಾತ್ರಿ ಕೆಡವಲಾಗಿದೆ. ಘೋರ ಅಪರಾಧ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲಎಂದು ಧಾಮಿ ಹೇಳಿದ್ದಾರೆ. 

ಯುವತಿಯನ್ನು ಕೊಂದು ಆಕೆಯ ಮೃತದೇಹವನ್ನು ಚೀಲಾ ಕಾಲುವೆಗೆ ಎಸೆದಿರುವುದಾಗಿ ತಪ್ಪೊಪ್ಪಿಕೊಂಡ ನಂತರ ಪುಲ್ಕಿತ್ ಆರ್ಯ, ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ಮ್ಯಾನೇಜರ್ ಅಂಕಿತ್ ಗುಪ್ತಾ ಅವರನ್ನು ಶುಕ್ರವಾರ ಬಂಧಿಸಲಾಗಿದೆ. ಆರಂಭದಲ್ಲಿ ಆರೋಪಿಗಳು ಪೊಲೀಸರನ್ನು ದಾರಿತಪ್ಪಿಸಲು ಪ್ರಯತ್ನಿಸಿದರು, ಆದರೆ ತೀವ್ರವಾಗಿ ವಿಚಾರಣೆ ನಡೆಸಿದಾಗ ಅವರು ಅಪರಾಧವನ್ನು ಒಪ್ಪಿಕೊಂಡರು ಎಂದು ಪೌರಿ ಎಎಸ್ಪಿ ಶೇಖರ್ ಚಂದ್ರ ಸುಯಲ್ ಶುಕ್ರವಾರ ಹೇಳಿದ್ದಾರೆ.

ಯುವತಿ ಶವವಾಗಿ ಪತ್ತೆಯಾಗುವ ಮೊದಲು ಸೋಮವಾರ ಬೆಳಿಗ್ಗೆ ಕಾಣದ ಹಿನ್ನೆಲೆಯಲ್ಲಿ ಆಕೆಯ ಪೋಷಕರು ಕಂದಾಯ ಪೊಲೀಸ್ ಹೊರ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಿಸಿದ್ದರು.

SCROLL FOR NEXT