ದೇಶ

ಸಾಲ ಕೊಟ್ಟವರಿಂದ ಕಿರುಕುಳ: ಸಿಎಂ ಪಿಣರಾಯಿ ವಿಜಯನ್ ಭೇಟಿಗೆ ಮನೆ ಬಿಟ್ಟು ಓಡಿಹೋದ ಬಾಲಕ

Ramyashree GN

ಕೋಯಿಕ್ಕೋಡ್: ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಭೇಟಿ ಮಾಡಲು ಕೋಯಿಕ್ಕೋಡ್‌ನ 16 ವರ್ಷದ ಬಾಲಕನೊಬ್ಬ ತನ್ನ ಮನೆಯಿಂದ ಪರಾರಿಯಾಗಿರುವ ಘಟನೆ ತಿರುವನಂತಪುರಂನಲ್ಲಿ ನಡೆದಿದೆ.

ಕೋಯಿಕ್ಕೋಡ್‌ನ ವೆಲೋಮ್ ಪಂಚಾಯತ್‌ನ ಕೊಯೂರಾ ವಾರ್ಡ್‌ನ ನಿವಾಸಿ ರಾಜೀವ್ ತರಕ್ಕಂಡಿ ಅವರ ಪುತ್ರ ದೇವಾನಂದನ್, ತನ್ನ ಕುಟುಂಬದಲ್ಲಿರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ದೂರು ಸಲ್ಲಿಸಲು ಮನೆ ಬಿಟ್ಟು ಹೋಗಿದ್ದಾರೆ.

ದೇವಾನಂದನ್ ಅವರ ಪೋಷಕರು ಖಾಸಗಿ ಲೇವಾದೇವಿ ಸಂಸ್ಥೆಯಿಂದ ಬಡ್ಡಿಗೆ ಹಣ ಪಡೆದಿದ್ದರು ಮತ್ತು ಸಾಲ ತೀರಿಸದ ಕಾರಣ ಕಿರುಕುಳ ಅನುಭವಿಸುತ್ತಿದ್ದರು. ತನ್ನ ಕುಟುಂಬ ಸಂಕಷ್ಟದಲ್ಲಿರುವುದನ್ನು ಕಂಡ ಬಾಲಕ ತನ್ನ ಪೋಷಕರಿಗೆ ಹೇಳದೆ ತಿರುವನಂತಪುರಕ್ಕೆ ತೆರಳಿದ್ದಾನೆ. ಶನಿವಾರ ಬೆಳಗ್ಗೆ ವಡಕರದಿಂದ ಎರನಾಡ್ ಎಕ್ಸ್‌ಪ್ರೆಸ್ ಹತ್ತಿ ರಾತ್ರಿ 9 ಗಂಟೆಗೆ ತಿರುವನಂತಪುರಂ ತಲುಪಿದ್ದಾನೆ.

ತಂಪನೂರಿನಿಂದ ಆಟೋದಲ್ಲಿ ಕ್ಲಿಫ್ ಹೌಸ್ ಇರುವ ದೇವಸ್ವಂ ಬೋರ್ಡ್ ಜಂಕ್ಷನ್ ತಲುಪಿದ ಆತ, ಭದ್ರತಾ ಉಸ್ತುವಾರಿ ವಹಿಸಿದ್ದ ಪೊಲೀಸರನ್ನು ಒಳಗೆ ಬಿಡುವಂತೆ ಕೋರಿದ್ದಾನೆ. ಆದರೆ, ಪೊಲೀಸರು ಆತನನ್ನು ಮ್ಯೂಸಿಯಂ ಠಾಣೆಗೆ ಕರೆದೊಯ್ದಿದ್ದಾರೆ. ಸಬ್ ಇನ್ಸ್‌ಪೆಕ್ಟರ್ ಜಿಜು ಮತ್ತು ಅವರ ತಂಡ ರಾತ್ರಿ ಅಲ್ಲೇ ಉಳಿಸಿಕೊಂಡು ಆತನಿಗೆ ಆಹಾರ ನೀಡಿದ್ದಾರೆ. ಬಳಿಕ ಹುಡುಗ ತಿರುವನಂತಪುರದಲ್ಲಿ ಸುರಕ್ಷಿತವಾಗಿದ್ದಾನೆ ಎಂದು ಆತನ ತಂದೆಗೆ ತಿಳಿಸಿದ್ದಾನೆ.

ಈಮಧ್ಯೆ, ದೇವಾನಂದನ ಪೋಷಕರು ವೆಲೋಮ್‌ನಲ್ಲಿ ತಮ್ಮ ಮಗನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು. 'ಶನಿವಾರ ಶಾಲೆಗೆ ಹೋಗುವುದಾಗಿ ಹೇಳಿ ಬಾಲಕ ಮನೆಯಿಂದ ತೆರಳಿದ್ದ. ಆದರೆ, ಆತ ಶಾಲೆಯಿಂದ ಹಿಂತಿರುಗಲಿಲ್ಲ. ಬಳಿಕ ಆತ ವಡಕರದಿಂದ ಬಸ್ ಹತ್ತಿದ ಬಗ್ಗೆ ಮಾಹಿತಿ ಲಭ್ಯವಾಯಿತು. ಆದರೆ, ಆತ ಅಲ್ಲಿಂದ ಎಲ್ಲಿಗೆ ಹೋದ ಎಂಬ ಬಗ್ಗೆ ನಮಗೆ ಯಾವುದೇ ಸುಳಿವು ಸಿಗಲಿಲ್ಲ. ಆಗ ನಮಗೆ ತಿರುವನಂತಪುರಂ ಪೊಲೀಸರಿಂದ ಕರೆ ಬಂತು’ ಎಂದು ರಾಜೀವ್ ಹೇಳಿದರು.

'ನಮ್ಮ ಕುಟುಂಬಕ್ಕೆ ಆರ್ಥಿಕ ಸಮಸ್ಯೆ ಇರುವುದು ನಿಜ. ಸಾಲ ಡೀಫಾಲ್ಟ್ ಆದ ನಂತರ ಸಂಸ್ಥೆಯಿಂದ ನಮಗೆ ನೋಟಿಫಿಕೇಶನ್ ಬಂದಿದೆ. ಸಾಲದ ನೋಟಿಫಿಕೇಶನ್ ಬಗ್ಗೆ ತಿಳಿದು ಹುಡುಗ ಭಯಗೊಂಡಿದ್ದಾನೆ ಎಂದು ರಾಜೀವ್ ಹೇಳಿದ್ದಾರೆ.

ಭಾನುವಾರ ಬೆಳಗ್ಗೆ ರಾಜೀವ್ ಮ್ಯೂಸಿಯಂ ಪೊಲೀಸ್ ಠಾಣೆಯನ್ನು ತಲುಪಿದರು. ಇದೇ ವೇಳೆ ದೇವಾನಂದನ್ ಆಗಮನದ ಮಾಹಿತಿಯನ್ನು ಪೊಲೀಸರು ಮುಖ್ಯಮಂತ್ರಿ ಕಚೇರಿಗೆ ರವಾನಿಸಿದ್ದರು. ಘಟನೆ ಬಗ್ಗೆ ತಿಳಿದ ಮುಖ್ಯಮಂತ್ರಿಗಳು ದೇವಾನಂದನ್ ಮತ್ತು ಅವರ ತಂದೆ ಇಬ್ಬರನ್ನೂ ತಮ್ಮ ಕಚೇರಿಗೆ ಕರೆತರುವಂತೆ ಹೇಳಿದ್ದರು.

ಮುಖ್ಯಮಂತ್ರಿಗಳು ತಾಳ್ಮೆಯಿಂದ ದೇವಾನಂದನ ಮಾತನ್ನುಆಲಿಸಿದರು ಮತ್ತು ತನ್ನ ಕುಟುಂಬಕ್ಕೆ ಮಾಹಿತಿ ನೀಡದೆ ಪ್ರಯಾಣಿಸಿದ ಹುಡುಗನಿಗೆ ಹಾಗೆ ಮಾಡದಂತೆ ಸಲಹೆ ನೀಡಿದರು. ಬಳಿಕ ಅವರನ್ನು ಕಳುಹಿಸಿಕೊಟ್ಟ ಸಿಎಂ, ಬಾಲಕನ ದೂರಿನ ಬಗ್ಗೆ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

'ನನ್ನ ಮನೆಯವರಿಗೆ ತಿಳಿಸದೆ ನಾನು ಒಬ್ಬನೇ ತಿರುವನಂತಪುರಕ್ಕೆ ಹೋಗಬಾರದಿತ್ತು ಎಂದು ಈಗ ನನಗೆ ಅರ್ಥವಾಗಿದೆ. ಆದರೆ ಮುಖ್ಯಮಂತ್ರಿಗಳು ನನ್ನ ದೂರನ್ನು ಪರಿಗಣಿಸಿರುವುದು ನನಗೆ ಸಮಾಧಾನ ತಂದಿದೆ’ ಎಂದು ಅವಲದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ದೇವಾನಂದನ್ ಹೇಳಿದ್ದಾರೆ.

SCROLL FOR NEXT