ದೇಶ

ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ಕಾಂಗ್ರೆಸ್ ಬೆಂಬಿಡದ ಇಕ್ಕಟ್ಟು!

Srinivas Rao BV

ನವದೆಹಲಿ: ರಾಜಸ್ಥಾನದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಅವರ ಉತ್ತರಾಧಿಕಾರಿಯ ನೇಮಕಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಬಿಕ್ಕಟ್ಟು ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. 

ಹೊಸ ಸಿಎಂ ಆಯ್ಕೆ ಮಾಡುವುದಕ್ಕೆ ಪಕ್ಷದ ನಾಯಕತ್ವಕ್ಕೇ ರಾಜಸ್ಥಾನದ 82 ಮಂದಿ ಶಾಸಕರು ಷರತ್ತು ವಿಧಿಸಿರುವುದನ್ನು ಕಾಂಗ್ರೆಸ್ ನಾಯಕತ್ವ ಅಶಿಸ್ತು ಎಂದು ಹೇಳಿದೆ.
 
ವೀಕ್ಷಕರಾಗಿ ರಾಜಸ್ಥಾನಕ್ಕೆ ತೆರಳಿದ್ದ ಮಲ್ಲಿಕಾರ್ಜುನ ಖರ್ಗೆ ಹಾಗೂ ಅಜಯ್ ಮಕೇನ್ ರಾಜಸ್ಥಾನದಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ವರದಿ ಸಿದ್ಧಪಡಿಸುತ್ತಿದ್ದಾರೆ. 

ವರದಿ ಬಂದ ಬಳಿಕ ಸೋನಿಯಾ ಗಾಂಧಿ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.

ಕಾಂಗ್ರೆಸ್ ನ ಖಜಾಂಚಿ ಪವನ್ ಕುಮಾರ್ ಬನ್ಸಾಲ್ ಹಾಗೂ ಸಂಸದ ಶಶಿ ತರೂರ್ ನಾಮಪತ್ರ ಫಾರ್ಮ್ ಗಳನ್ನು ಪಡೆದಿದ್ದು, ಇತ್ತ ರಾಜಸ್ಥಾನದಲ್ಲಿ ಗೆಹ್ಲೋಟ್ ಹಾಗೂ ಅವರ ಬೆಂಬಲಿಗರು ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.

ರಾಜಸ್ಥಾನದಲ್ಲಿ ಉಂಟಾಗಿರುವ ಅಶಿಸ್ತಿಗೆ ಹೈಕಮಾಂಡ್ ಕ್ರಮ ಕೈಗೊಳ್ಳುವ ಸ್ಪಷ್ಟ ಸಂದೇಶ ನೀಡಿದ್ದು, ಈಗ ಗೆಹ್ಲೋಟ್ ತಮ್ಮ ಸಿಎಂ ಹುದ್ದೆಯನ್ನು ಉಳಿಸಿಕೊಳ್ಳಲಿದ್ದಾರಾ? ಅಥವಾ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲಿದ್ದಾರಾ? ಎಂಬುದು ಪ್ರಶ್ನೆಯಾಗಿದೆ. 

ಗೆಹ್ಲೋಟ್ ಕ್ಯಾಂಪ್ ಹೈಕಮಾಂಡ್ ಗೇ ಸ್ಪಷ್ಟನೆ ನೀಡಿದ್ದು, ಸ್ವತಃ ಗೆಹ್ಲೋಟ್ ಗೆ ಹಾಗೂ ಅವರ ಬೆಂಬಲಿಗರಿಗೆ ಗೆಹ್ಲೋಟ್ ಅವರು ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವುದು ಇಷ್ಟವಿಲ್ಲ ಎಂದು ತಿಳಿಸಿದ್ದಾರೆ. ಇದಕ್ಕೆ ವೀಕ್ಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೆಹ್ಲೋಟ್ ಬಣದ ಪ್ರಕಾರ, ಉದ್ದೇಶಪೂರ್ವಕವಾಗಿ ಗೆಹ್ಲೋಟ್ ಅವರ ಹೆಸರನ್ನು ಹಾಳು ಮಾಡಲಾಗುತ್ತಿದೆ. ಮೂಲಗಳ ಪ್ರಕಾರ ಗೆಹ್ಲೋಟ್ ಸಿಎಂ ಖುರ್ಚಿಯನ್ನು ಉಳಿಸಿಕೊಳ್ಳುವುದರತ್ತ ಹೆಚ್ಚು ಒಲವು ಹೊಂದಿದ್ದಾರೆ ಎಂದು ತಿಳಿದುಬಂದಿದೆ. 
 

SCROLL FOR NEXT