ಅಶೋಕ್ ಗೆಹ್ಲೋಟ್ 
ದೇಶ

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲ್ಲ; ಜೈಪುರದಲ್ಲಿ ನಡೆದಿದ್ದಕ್ಕೆ ಸೋನಿಯಾ ಕ್ಷಮೆಯಾಚಿಸಿದ್ದೇನೆ: ಅಶೋಕ್ ಗೆಹ್ಲೋಟ್

ತಮ್ಮ ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗುರುವಾರ ಘೋಷಿಸಿದ್ದು, ಸಿಎಂ ಆಗಿ ಉಳಿಯುವ ಕುರಿತು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.

ನವದೆಹಲಿ: ತಮ್ಮ ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗುರುವಾರ ಘೋಷಿಸಿದ್ದು, ಸಿಎಂ ಆಗಿ ಉಳಿಯುವ ಕುರಿತು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಸೋನಿಯಾ ಗಾಂಧಿ ಅವರನ್ನು ದೆಹಲಿಯ 10 ಜನಪಥ್ ನಿವಾಸದಲ್ಲಿ ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಸ್ಥಾನದಲ್ಲಿನ ಬಿಕ್ಕಟ್ಟು ಬಗೆಹರಿಸಲು ಬಂದಿದ್ದ ಕೇಂದ್ರದ ವೀಕ್ಷಕರನ್ನು ಧಿಕ್ಕರಿಸಿ, ಪಕ್ಷದ ಶಾಸಕರ ಸಭೆ ನಡೆಸುವ ಅವರ ಯೋಜನೆಯನ್ನು ವಿಫಲಗೊಳಿಸಲಾಯಿತು. ಭಾನುವಾರ ನಡೆದ ಈ ಬೆಳವಣಿಗೆಗಳಿಗೆ ಕ್ಷಮೆಯಾಚಿಸಿದ್ದೇನೆ ಎಂದರು.

ಮೂರು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಗೆಹ್ಲೋಟ್ ಅವರು ತಮ್ಮನ್ನು ಪಕ್ಷದ ಶಿಸ್ತಿನ ಸಿಪಾಯಿ ಎಂದು ಬಣ್ಣಿಸಿಕೊಂಡಿದ್ದು, ರಾಜ್ಯದಲ್ಲಾದ ಘಟನೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಯಾಗಿ ಮುಂದುವರಿಯುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಗೆಹ್ಲೋಟ್, ಈ ವಿಚಾರದ ಬಗ್ಗೆ ಸೋನಿಯಾ ಗಾಂಧಿ ಅವರು ತೀರ್ಮಾನ ತಗೆದುಕೊಳ್ಳುತ್ತಾರೆ ಎಂದರು.

'ಕೇಂದ್ರ ಸಚಿವನಾಗಿ, ರಾಜ್ಯ ಘಟಕದ ಮುಖ್ಯಸ್ಥನಾಗಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಅಥವಾ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಕಳೆದ 50 ವರ್ಷಗಳಲ್ಲಿ ನಾನು ಇಂದಿರಾ ಗಾಂಧಿ, ರಾಜೀವ್ ಗಾಂಧಿ, ನರಸಿಂಹರಾವ್ ಮತ್ತು ಸೋನಿಯಾ ಅವರ ಕಾಲದಿಂದಲೂ ಕಾಂಗ್ರೆಸ್‌ನ ನಿಷ್ಠಾವಂತ ಸೈನಿಕನಾಗಿ ಕೆಲಸ ಮಾಡಿದ್ದೇನೆ. ಇದೆಲ್ಲವನ್ನು ನಾನು ಮರೆಯಲು ಸಾಧ್ಯವಿಲ್ಲ' ಎಂದು ಹೇಳಿದರು.

'ನಾನು ಸಿಎಂ ಆಗಿಯೇ ಇರಲು ಬಯಸುತ್ತೇನೆ ಎಂಬ ಸಂದೇಶ ಎಲ್ಲರಿಗೂ ತಲುಪಿದ್ದರಿಂದ ನನಗೆ ಎಷ್ಟು ನೋವಾಗಿದೆ ಎಂದು ನನಗೆ ಮಾತ್ರ ಗೊತ್ತು. ನಾನು ಸೋನಿಯಾ ಜೀ ಅವರಲ್ಲಿ ಕ್ಷಮೆಯಾಚಿಸಿದ್ದೇನೆ. ಏಕೆಂದರೆ, ನಾನು ತೆಗೆದುಕೊಂಡ ಸರಳವಾದ ನಿರ್ಣಯವನ್ನು ಅಂಗೀಕರಿಸಲು ಸಾಧ್ಯವಾಗದ ಪರಿಸ್ಥಿತಿ ಉದ್ಭವಿಸಿದೆ. ನಾನು, ಸಿಎಲ್‌ಪಿ ನಾಯಕನಾಗಿದ್ದರೂ ಕೂಡ ಕಾರಣ ಏನೇ ಇರಲಿ ನಿರ್ಣಯವನ್ನು ಅಂಗೀಕರಿಸಲು ಸಾಧ್ಯವಾಗಲಿಲ್ಲ. ನಂತರದ ಘಟನೆಗಳ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ನಿರ್ಧರಿಸಿದ್ದೇನೆ' ಎಂದು ಅವರು ಹೇಳಿದರು.

ಈಮಧ್ಯೆ, ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದ್ದು, ಶಶಿ ತರೂರ್ ಅವರನ್ನು ಭೇಟಿ ಮಾಡಿದ್ದಾರೆ. ತಮ್ಮದು 'ಪ್ರತಿಸ್ಪರ್ಧಿಗಳ ನಡುವಿನ ಯುದ್ಧವಲ್ಲ ಆದರೆ ಸಹೋದ್ಯೋಗಿಗಳ ನಡುವಿನ ಸೌಹಾರ್ದ ಸ್ಪರ್ಧೆ' ಎಂದು ಒಪ್ಪಿಕೊಂಡಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ತಿಳಿಸಿದ್ದಾರೆ.

'ನಮ್ಮ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ದಿಗ್ವಿಜಯ್ ಸಿಂಗ್ ಅವರ ಉಮೇದುವಾರಿಕೆಯನ್ನು ನಾನು ಸ್ವಾಗತಿಸುತ್ತೇನೆ' ಎಂದು ತರೂರ್ ಟ್ವೀಟ್ ಮಾಡಿದ್ದಾರೆ.

ನಾಮಪತ್ರ ಪ್ರಕ್ರಿಯೆಯ ಕೊನೆಯ ದಿನವಾದ ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವುದಾಗಿ ತರೂರ್ ಈಗಾಗಲೇ ಘೋಷಿಸಿದ್ದಾರೆ.

ಅಧ್ಯಕ್ಷ ಹುದ್ದೆಗೆ ಅಕ್ಟೋಬರ್ 17 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 19 ರಂದು ಫಲಿತಾಂಶ ಪ್ರಕಟವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT