ದೇಶ

ಸಿಬಿಐ ‘ಸತ್ಯ, ನ್ಯಾಯದ ಬ್ರಾಂಡ್’ ಆಗಿ ಹೊರಹೊಮ್ಮಿದೆ: ಕೇಂದ್ರ ತನಿಖಾ ಸಂಸ್ಥೆಯನ್ನು ಹಾಡಿಹೊಗಳಿದ ಪ್ರಧಾನಿ ಮೋದಿ

Lingaraj Badiger

ನವದೆಹಲಿ: ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ)ಯನ್ನು ಹಾಡಿಹೊಗಳಿದ ಪ್ರಧಾನಿ ನರೇಂದ್ರ ಮೋದಿ, ಸಿಬಿಐ ಸತ್ಯ, ನ್ಯಾಯದ ಬ್ರಾಂಡ್ ಆಗಿ ಹೊರಹೊಮ್ಮಿದೆ ಎಂದು ಸೋಮವಾರ ಹೇಳಿದ್ದಾರೆ.

ಇಂದು ದೆಹಲಿ ವಿಜ್ಞಾನ ಭವನದಲ್ಲಿ ನಡೆದ ಸಿಬಿಐ ವಜ್ರ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸಿಬಿಐ ಸಾಮಾನ್ಯ ನಾಗರಿಕರಿಗೆ ಹೊಸ ಭರವಸೆ ಮತ್ತು ಶಕ್ತಿಯನ್ನು ನೀಡಿದೆ ಎಂದರು.

ಸಿಬಿಐ ಸತ್ಯ ಮತ್ತು ನ್ಯಾಯದ ಬ್ರಾಂಡ್‌ ಆಗಿ ಹೊರಹೊಮ್ಮಿರುವುದರಿಂದ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರೀಯ ತನಿಖಾ ಸಂಸ್ಥೆಯ ವ್ಯಾಪ್ತಿ ಹಲವು ಪಟ್ಟು ಹೆಚ್ಚಿದೆ. ಆದರೆ ದೇಶವನ್ನು ಭ್ರಷ್ಟಾಚಾರ ಮುಕ್ತ ಮಾಡುವುದು ಸಿಬಿಐನ ಮುಖ್ಯ ಜವಾಬ್ದಾರಿಯಾಗಿದೆ ಎಂದರು.

ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲು ಯಾವುದೇ ರೀತಿಯ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇಲ್ಲ. ಭ್ರಷ್ಟಾಚಾರದ ವಿರುದ್ಧ ಕಾರ್ಯಾಚರಣೆ ನಡೆಸುವ ವೇಳೆ ತನಿಖಾ ಸಂಸ್ಥೆಗಳಿಗೆ ಯಾವುದೇ ಹಿಂಜರಿಕೆ ಬೇಡ ಎಂದರು.

ಭ್ರಷ್ಟಾಚಾರ ಒಂದು ಸಾಮಾನ್ಯ ಅಪರಾಧ ಅಲ್ಲ. ಭ್ರಷ್ಟಾಚಾರವು ಬಡವರ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಭ್ರಷ್ಟಾಚಾರದಿಂದ ಹಲವು ಅಕ್ರಮಗಳು, ಅಪರಾಧಗಳು ಹುಟ್ಟಿಕೊಳ್ಳುತ್ತವೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ, ನ್ಯಾಯ ದಾನ ವ್ಯವಸ್ಥೆಗೆ ಭ್ರಷ್ಟಾಚಾರವು ಅತಿ ದೊಡ್ಡ ಅಡ್ಡಿ ಎಂದು ಪ್ರಧಾನಿ ಮೋದಿ ಹೇಳಿದರು.

SCROLL FOR NEXT