ದೇಶ

ದೆಹಲಿ ಸರ್ಕಾರಿ ಶಾಲೆಗಳ ಆಧುನೀಕರಣಕ್ಕೆ ಮನೀಶ್ ಸಿಸೋಡಿಯಾ ಕಾರಣ: ಸಿಎಂ ಅರವಿಂದ್ ಕೇಜ್ರಿವಾಲ್

Srinivasamurthy VN

ನವದೆಹಲಿ: ದೆಹಲಿ ಸರ್ಕಾರಿ ಶಾಲೆಗಳ ಆಧುನೀಕರಣಕ್ಕೆ ಮನೀಶ್ ಸಿಸೋಡಿಯಾ ಕಾರಣ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಶನಿವಾರ ದೆಹಲಿಯ ಪೂರ್ವ ವಿನೋದ್ ನಗರದಲ್ಲಿ ರಾಜ್‌ಕೀಯ ಸರ್ವೋದಯ ಕನ್ಯಾ ಬಾಲ ವಿದ್ಯಾಲಯದ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದ ಸಿಎಂ ಅರವಿಂದ್ ಕೇಜ್ರಿವಾಲ್, 'ರಾಷ್ಟ್ರ ರಾಜಧಾನಿಯಲ್ಲಿ ಶಾಲೆಗಳ ಆಧುನೀಕರಣಕ್ಕೆ ಮನೀಶ್ ಸಿಸೋಡಿಯಾ ಕಾರಣ. ಪ್ರತಿ ದಿನ ಮುಂಜಾನೆ ಆರು ಗಂಟೆಗೆ ಎದ್ದು ತಪಾಸಣೆಗೆ ತೆರಳುವ ಸಿಸೋಡಿಯಾ ಅವರಿಂದಲೇ ಕಳೆದ ಎಂಟು ವರ್ಷಗಳಲ್ಲಿ ದೆಹಲಿ ಸರ್ಕಾರಿ ಶಾಲೆಗಳು ಬದಲಾವಣೆಯಾಗಲು ಸಾಧ್ಯವಾಗಿದೆ ಎಂದು ಹೇಳಿದರು.

ಭ್ರಷ್ಟಾಚಾರದ ಆರೋಪದಲ್ಲಿ ಕೇಂದ್ರವು ಸಿಸೋಡಿಯಾ ಅವರನ್ನು ಜೈಲಿಗೆ ಅಟ್ಟಿದೆ. ಆದರೆ ಪ್ರತಿ ದಿನ ಬೆಳಗ್ಗೆ ಎದ್ದು ಶಾಲೆಗಳಿಗೆ ಭೇಟಿ ನೀಡುತ್ತಿದ್ದ ನಾಯಕರು ಅವರಾಗಿದ್ದಾರೆ. ಭ್ರಷ್ಟ ನಾಯಕರಾಗಿದ್ದರೆ ಹಾಗೇ ಮಾಡುತ್ತಿರಲಿಲ್ಲ. ದೆಹಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ವೈದ್ಯರು, ಎಂಜಿನಿಯರ್ ಮತ್ತು ಪೊಲೀಸ್ ಅಧಿಕಾರಿಗಳಂತಹ ಉನ್ನತ ಪದವಿ ಹೊಂದುತ್ತಿದ್ದಾರೆ. ಈ ಶಿಕ್ಷಣ ಬದಲಾವಣೆಯ ಹಿಂದೆ ಓರ್ವ ವ್ಯಕ್ತಿ ಇದ್ದು, ಅವರೇ ಮನೀಶ್ ಸಿಸೋಡಿಯಾ ಎಂದು ಹೇಳಿದರು.

ಅಂತೆಯೇ ರಾಜ್‌ಕೀಯ ಸರ್ವೋದಯ ಕನ್ಯಾ ಬಾಲ ವಿದ್ಯಾಲಯದ ನೂತನ ಕಟ್ಟಡ ನಿರ್ಮಾಣದ ಬಳಿಕ ಕೊಲಂಬಿಯಾ ವಿಶ್ವವಿದ್ಯಾಲಯದಂತೆ ಕಾಣಲಿದೆ ಎಂದು ಕೇಜ್ರಿವಾಲ್ ಹೇಳಿದರು.
 

SCROLL FOR NEXT